ಮಣಿಪುರ | ಅಸ್ಸಾಂ ರೈಫಲ್ಸ್ ವಾಹನದ ಮೇಲೆ ಹೊಂಚು ದಾಳಿ ಪ್ರಕರಣ : ಪ್ರಮುಖ ಆರೋಪಿ ಸೆರೆ
PC : PTI
ಇಂಫಾಲ,ಸೆ.24: ಮಣಿಪುರದ ವಿಷ್ಣುಪುರ ಜಿಲ್ಲೆಯ ನಾಂಬೋಲ್ ಎಂಬಲ್ಲಿ ಸೆ.19ರಂದು ಅಸ್ಸಾಂ ರೈಫಲ್ಸ್‌ನ ವಾಹನದ ಮೇಲೆ ನಡೆದಿದ್ದ ಹೊಂಚುದಾಳಿಯ ಪ್ರಮುಖ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ದಾಳಿಯಲ್ಲಿ ಇಬ್ಬರು ಸಿಬ್ಬಂದಿಗಳು ಕೊಲ್ಲಲ್ಪಟ್ಟಿದ್ದು, ಇತರ ಐವರು ಗಾಯಗೊಂಡಿದ್ದರು.
ಕಮೆಂಗ್ ಪ್ರದೇಶದಲ್ಲಿ ಸಶಸ್ತ್ರ ಉಗ್ರರ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಭದ್ರತಾ ಸಿಬ್ಬಂದಿಗಳು ಬುಧವಾರ ನಸುಕಿನ ಒಂದು ಗಂಟೆಯ ಸುಮಾರಿಗೆ ವಿಶೇಷ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಈ ವೇಳೆ ಖಂಡೊಂಗ್‌ಬಾಮ್ ಒಜಿತ್ ಸಿಂಗ್(47) ಎಂಬಾತನನ್ನು ಬಂಧಿಸಲಾಗಿದ್ದು, ತಾನು ನಿಷೇಧಿತ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್‌ಎ)ಯ ಸದಸ್ಯ ಎಂದು ಆತ ಒಪ್ಪಿಕೊಂಡಿದ್ದಾನೆ. ಆತ ಸೆ.19ರ ಹೊಂಚುದಾಳಿಯಲ್ಲಿ ನೇರವಾಗಿ ಭಾಗಿಯಾಗಿದ್ದ. ಬಂಧಿತ ಆರೋಪಿಯು ನೀಡಿದ ಮಾಹಿತಿಯ ಮೇರೆಗೆ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ರಾಜೀವ್ ಸಿಂಗ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಾಳಿಯಲ್ಲಿ ಭಾಗಿಯಾಗಿದ್ದ ಇತರ ದುಷ್ಕರ್ಮಿಗಳ ಬಂಧನಕ್ಕಾಗಿ ದಾಳಿ ಕಾರ್ಯಾಚರಣೆ ಮುಂದುವರಿದಿದೆ.
ಸೆ.20ರಂದು ಹೊಂಚುದಾಳಿಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದ ಪೋಲಿಸರು ದಾಳಿಯಲ್ಲಿ ಬಳಸಲಾಗಿತ್ತು ಎಂದು ಶಂಕಿಸಲಾದ ವ್ಯಾನ್‌ನ್ನು ವಶಪಡಿಸಿಕೊಂಡಿದ್ದರು.