×
Ad

ಶಾಂತವಾಗಿರಿ, ತಪ್ಪು ಮಾಹಿತಿಗಳಿಗೆ ಬಲಿಯಾಗಬೇಡಿ ಎಂದು ಜನತೆಗೆ ಕರೆ ನೀಡಿದ ಮಣಿಪುರ ಸರಕಾರ

Update: 2025-02-11 19:22 IST

PC : PTI 

ಇಂಫಾಲ: ಮಣಿಪುರ ಜನತೆಗೆ ಶಾಂತವಾಗಿರಿ ಎಂದು ಮನವಿ ಮಾಡಿರುವ ರಾಜ್ಯ ಸರಕಾರ, ರಾಜ್ಯದಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಅಥವಾ ಶಾಂತಿ ಮತ್ತು ಸೌಹಾರ್ದತೆಯನ್ನು ಕದಡುವ ಪರಿಶೀಲನೆಗೊಳಗಾದ ಸುದ್ದಿ, ವದಂತಿಗಳು ಅಥವಾ ತಪ್ಪು ಮಾಹಿತಿಗಳಿಗೆ ಬಲಿಯಾಗಬೇಡಿ ಎಂದು ಎಚ್ಚರಿಸಿದೆ.

ಫೆಬ್ರವರಿ 9ರಂದು ಎನ್.ಬಿರೇನ್ ಸಿಂಗ್ ತಮ್ಮ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದಾಗಿನಿಂದ ಉಂಟಾಗಿರುವ ನಾಯಕತ್ವ ಬಿಕ್ಕಟ್ಟಿನ ಬೆನ್ನಿಗೇ ಈ ಮನವಿಯನ್ನು ಮಾಡಲಾಗಿದೆ.

“ಕೆಲ ದುಷ್ಕರ್ಮಿಗಳ ಗುಂಪು ಅಶಾಂತಿಯನ್ನು ಹರಡಲು, ಸೌಹಾರ್ದತೆಗೆ ಧಕ್ಕೆ ತರಲು ಹಾಗೂ ಸುಳ್ಳು ಮಾಹಿತಿಗಳು, ಉದ್ರೇಕಕಾರಿ ತುಣುಕುಗಳು ಅಥವಾ ತಿರುಚಿದ ನಿರೂಪಣೆಯ ಮೂಲಕ ಸೌಹಾರ್ದತೆಯನ್ನು ಕದಡಲು ಉದ್ದೇಶಪೂರ್ವಕವಾಗಿ ಯತ್ನಿಸುವ ಸಾಧ್ಯತೆ ಇರುವುದು ಸರಕಾರದ ಗಮನಕ್ಕೂ ಬಂದಿದೆ” ಎಂದು ಮುಖ್ಯ ಕಾರ್ಯದರ್ಶಿ ಪಿ.ಕೆ.ಸಿಂಗ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಎಂದು ಹೇಳಲಾಗಿದೆ.

“ಇಂತಹ ಪ್ರಯತ್ನಗಳು ಕಾನೂನುರಾಹಿತ್ಯ ಸ್ಥಿತಿಯನ್ನು ಉಂಟು ಮಾಡುವ ಉದ್ದೇಶವನ್ನು ಹೊಂದಿದ್ದು, ಇಂತಹ ತಪ್ಪು ಮಾಹಿತಿ ಅಥವಾ ಪ್ರಚೋದನೆಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಬಲವಾಗಿ ಸಲಹೆ ನೀಡಲಾಗಿದೆ” ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

“ಸಾರ್ವಜನಿಕರು ನಿಖರ ಮಾಹಿತಿ ಸ್ವೀಕರಿಸುವುದನ್ನು ಖಾತರಿ ಪಡಿಸಲು ಸರಕಾರವು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದ್ದು, ನಾಗರಿಕರು ತಮ್ಮ ಗಮನಕ್ಕೆ ಬರುವ ಯಾವುದೇ ಸುದ್ದಿ ಅಥವಾ ಮಾಹಿತಿಯನ್ನು ಇಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ. ದೂರವಾಣಿ ಸಂಖ್ಯೆ 9485280419 ಅನ್ನು ಸಂಪರ್ಕಿಸುವ ಮೂಲಕ, ಈ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದಾಗಿದೆ ಹಾಗೂ ಈ ನಿಯಂತ್ರಣ ಕೊಠಡಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೇ 2023ರಲ್ಲಿ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಸ್ಫೋಟಗೊಂಡ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ 250ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ನಿರ್ವಸತಿಗರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News