×
Ad

‌ಮಣಿಪುರ: ಹಲವೆಡೆ ಕುಕಿ ಮಹಿಳೆಯರ ಪ್ರತಿಭಟನೆ; ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ ಮರುಜಾರಿಗೆ ಆಗ್ರಹ

Update: 2023-08-19 13:32 IST

Photo: NDTV

ಇಂಫಾಲ್:‌ ಮಣಿಪುರದ ಉಕ್ರುಲ್‌ ಜಿಲ್ಲೆಯ ಥೊವೈ ಗ್ರಾಮದಲ್ಲಿ ಶಂಕಿತ ನುಸುಳುಕೋರರಿಂದ ಮೂವರ ಬರ್ಬರ ಹತ್ಯೆ ಘಟನೆಯ ನಂತರ ಅಲ್ಲಿನ ಹಲವೆಡೆ, ಪ್ರಮುಖವಾಗಿ ಕಂಗ್ಪೊಕ್ಪಿ ಜಿಲ್ಲೆಯ ಕೂಕಿ-ಝೊ ಬಾಹುಳ್ಯದ ಪ್ರದೇಶಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಜಿಲ್ಲೆಯ ನೂರಾರು ಮಹಿಳೆಯರು ಶುಕ್ರವಾರ ಮಧ್ಯಾಹ್ನದಿಂದ ರಾಷ್ಟ್ರೀಯ ಹೆದ್ದಾರಿ-2 ಉದ್ದಕ್ಕೂ ಪ್ರತಿಭಟನೆ ನಡೆಸುತ್ತಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಅಸ್ಸಾಂ ರೈಫಲ್ಸ್‌ ಪಡೆಗಳನ್ನು ಮರುನಿಯೋಜಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.

ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಅವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಎಲ್ಲವನ್ನೂ ಮರೆತು ಎಲ್ಲರನ್ನೂ ಕ್ಷಮಿಸಿ ಶಾಂತಿಯುತವಾಗಿ ಹಿಂದಿನಂತೆ ಜೀವಿಸಬೇಕೆಂದು ಕರೆ ನೀಡಿದ ಎರಡೇ ದಿನಗಳಲ್ಲಿ ಮೂವರನ್ನು ಹತ್ಯೆಗೈಯ್ಯಲಾಗಿದೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.

ಕೇಂದ್ರ ಸರ್ಕಾರ ಹಸ್ತಕ್ಷೇಪ ನಡೆಸಬೇಕು, ಮೃತರ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ವಿವಾದಿತ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ಮರುಜಾರಿಗೊಳಿಸಬೇಕೆಂಬ ಆಗ್ರಹವನ್ನೂ ಪ್ರತಿಭಟನಾಕಾರರು ಮಾಡಿದ್ದಾರೆ. ಈ ಕುರಿತು ಕಮಿಟಿ ಆನ್‌ ಟ್ರೈಬಲ್‌ ಯುನಿಟಿ ಕೇಂದ್ರಕ್ಕೆ ಮನವಿ ಮಾಡಿದೆ. ಮಣಿಪುರದ ಎಲ್ಲಾ ಕಣಿವೆ ಮತ್ತು ಗುಡ್ಡಗಾಡು ಜಿಲ್ಲೆಗಳಲ್ಲಿ ಈ ಕಾಯಿದೆ ಜಾರಿಗೊಳಿಸುವಂತೆ ಆಗ್ರಹಿಸಲಾಗಿದೆ.

“ರಾಷ್ಟ್ರಪತಿಗಳ ಕಾಯಿದೆ ಹೇರಲು ಸಾಧ್ಯವಾಗದೇ ಇದ್ದರೆ ಏಕೆ ವಿಧಿ 355 ಜಾರಿಗೊಳಿಸಬಾರದು. ಅಸ್ಸಾಂ ರೈಫಲ್ಸ್‌ ಅನ್ನು ಲಿಟನ್‌ ಪ್ರದೇಶ (ಉಖ್ರುಲ್)ದಿಂದ ತೆಗೆದುಹಾಕಿದ್ದೇ ಹತ್ಯೆಗಳಿಗೆ ಕಾರಣ,” ಎಂದು ಸಮಿತಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News