×
Ad

ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ: FIR ದಾಖಲಿಸಲು ಪೊಲೀಸರಿಗೆ 14 ದಿನಗಳೇಕೆ ಬೇಕಾಯಿತು ಎಂದು ಪ್ರಶ್ನಿಸಿದ ಸುಪ್ರೀಂ

Update: 2023-07-31 21:28 IST

Photo: ಸುಪ್ರೀಂ ಕೋರ್ಟ್ | PTI

ಹೊಸದಿಲ್ಲಿ: ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಮೂವರು ಕುಕಿ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೊದಲ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ಪೊಲೀಸರಿಗೆ 14 ದಿನಗಳು ಯಾಕೆ ಬೇಕಾಯಿತು ಎಂದು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.

‘‘ಆ 14 ದಿನಗಳ ಕಾಲ ಪೊಲೀಸರು ಏನು ಮಾಡುತ್ತಿದ್ದರು?’’ ಎಂದು ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಕೇಳಿದರು. ‘‘ಝೀರೋ ಎಫ್‌ಐಆರ್ (ಆರೋಪಿಗಳ ಹೆಸರು ಇಲ್ಲದ ಎಫ್‌ಐಆರ್) ದಾಖಲಿಸಲು 14 ದಿನಗಳು? ಯಾಕೆ?’’ ಎಂದು ಅವರು ಉದ್ಗರಿಸಿದರು.

‘‘ಮಣಿಪುರ ವೀಡಿಯೊದಲ್ಲಿರುವ ಮಹಿಳೆಯರನ್ನು ಪೊಲೀಸರೇ ದುಷ್ಕರ್ಮಿಗಳ ಗುಂಪಿಗೆ ಹಸ್ತಾಂತರಿಸಿದರು. ಇದು ಭಯಾನಕ’’ ಎಂದು ನ್ಯಾ. ಚಂದ್ರಚೂಡ್ ಹೇಳಿದರು.

ಮೇ 4ರಂದು ಕಾಂಗ್‌ಪೊಕ್ಪಿಯಲ್ಲಿ ನಡೆದ ಬೆತ್ತಲೆ ಮೆರವಣಿಗೆಯ ಇಬ್ಬರು ಸಂತ್ರಸ್ತ ಮಹಿಳೆಯರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಶ್ನೆಗಳನ್ನು ಕೇಳಿದೆ.

ಮೇ 4ರಂದು ಕಾಂಗ್‌ಪೊಕ್ಪಿಯ ಬಿ. ಫೈನೊಮ್‌ನಲ್ಲಿ ಮೂವರು ಕುಕಿ ಮಹಿಳೆಯರನ್ನು ಬೆತ್ತಲಾಗಿಸಿ ಅವರನ್ನು ಮೆರವಣಿಗೆಯಲ್ಲಿ ಒಯ್ಯಲಾಗಿತ್ತು ಹಾಗೂ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಅದರ ವೀಡಿಯೊ ಜುಲೈ 19ರಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆ ಪೈಕಿ ಓರ್ವ ಮಹಿಳೆಯ ಮೇಲೆ ‘‘ಅಮಾನುಷ ಸಾಮೂಹಿಕ ಅತ್ಯಾಚಾರ’’ ನಡೆಸಲಾಗಿತ್ತು ಎಂಬುದಾಗಿ ಪೊಲೀಸರಿಗೆ ಸಲ್ಲಿಸಲಾದ ದೂರಿನಲ್ಲಿ ಆರೋಪಿಸಲಾಗಿತ್ತು.

ಆದರೆ, ಝೀರೊ ಎಫ್‌ಐಆರ್‌ನ್ನು ಮೇ 18ರಂದು ದಾಖಲಿಸಲಾಗಿತ್ತು. ಆದರೆ, ಆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದು ಜುಲೈ 19ರಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕವಷ್ಟೆ.

ಸುಪ್ರೀಂ ಕೋರ್ಟ್ ಜುಲೈ 20ರಂದು ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿತ್ತು.

‘‘ಪ್ರಕರಣದ ತನಿಖೆಯನ್ನು ಸಿಬಿಐ ಮತ್ತು ವಿಶೇಷ ತನಿಖಾ ತಂಡ (SIT)ಕ್ಕೆ ಹಸ್ತಾಂತರಿಸುವುದಷ್ಟೇ ಸಾಕಾಗುವುದಿಲ್ಲ. ನ್ಯಾಯದ ಪ್ರಕ್ರಿಯೆ ಸಂತ್ರಸ್ತೆಯ ಮನೆ ಬಾಗಿಲಿಗೆ ಹೋಗುವಂತೆ ನೋಡಿಕೊಳ್ಳಬೇಕು’’ ಎಂದು ಮುಖ್ಯ ನ್ಯಾಯಾಧೀಶರ ನೇತೃತ್ವದ ನ್ಯಾಯಪೀಠ ಹೇಳಿತು. ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಈ ಪೀಠದ ಇತರ ಸದಸ್ಯರಾಗಿದ್ದಾರೆ.

ರಾಜ್ಯದಲ್ಲಿ ನೆಲೆಸಿರುವ ಪರಿಸ್ಥಿತಿಯ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ನ್ಯಾಯಲಯವು ಮಣಿಪುರ ಸರಕಾರಕ್ಕೆ ಸೂಚಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News