ನರ್ಮದಾ ನದಿ ತೀರದಲ್ಲಿರುವ ಪಟ್ಟಣಗಳಲ್ಲಿ ಮಾಂಸ, ಮದ್ಯಕ್ಕೆ ನಿಷೇಧ : ಮಧ್ಯಪ್ರದೇಶ ಸಿಎಂ ಘೋಷಣೆ
Update: 2024-09-15 10:40 IST
Photo : PTI
ಭೋಪಾಲ್: ನರ್ಮದಾ ನದಿ ತೀರದಲ್ಲಿರುವ ಧಾರ್ಮಿಕ ಕ್ಷೇತ್ರಗಳು ಹಾಗೂ ಪಟ್ಟಣಗಳಲ್ಲಿ ಮದ್ಯ, ಮಾಂಸ ಸೇವನೆಗೆ ನಿಷೇಧ ಹೇರಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಶನಿವಾರ ಘೋಷಿಸಿದ್ದಾರೆ.
ಈ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಮರ್ ಕಾಂತಕ್ ನಿಂದ ಕೊಲ್ಲಿಯ ಖಂಭತ್ ತನಕ 1,312 ಕಿಮೀ ದೂರ ಹರಿಯುವ ನರ್ಮದಾ ನದಿಯ ಸಂಸ್ಕೃತಿ ಮತ್ತು ಧಾರ್ಮಿಕ ಸಮಗ್ರತೆಯನ್ನು ಕಾಪಾಡಬೇಕಾದ ಮಹತ್ವವನ್ನು ಯಾದವ್ ಒತ್ತಿ ಹೇಳಿದ್ದಾರೆ.
ನರ್ಮದಾ ನದಿ ತೀರದಲ್ಲಿರುವ ಯಾವುದೇ ಜನವಸತಿ ಪ್ರದೇಶ ಅಥವಾ ವಾಣಿಜ್ಯ ಚಟುವಟಿಕೆ ನಡೆಯುವ ಪ್ರದೇಶಗಳಲ್ಲಿ ಮದ್ಯ, ಮಾಂಸ ಮಾರಾಟ ಅಥವಾ ಸೇವನೆಗೆ ಅವಕಾಶ ನೀಡಬಾರದು ಎಂದು ಅವರು ಆದೇಶಿಸಿದ್ದಾರೆ. “ನರ್ಮದಾ ಕೇವಲ ನದಿಯಲ್ಲ; ಬದಲಿಗೆ ನಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆ. ಅದರ ಪಾವಿತ್ರ್ಯತೆಯನ್ನು ಕಾಪಾಡಲೇಬೇಕಿದೆ. ಇದನ್ನು ಖಾತರಿ ಪಡಿಸಲು ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದೇವೆ” ಎಂದೂ ಅವರು ಹೇಳಿದ್ದಾರೆ.