×
Ad

122 ಕೋ.ರೂ.ದುರುಪಯೋಗ ಪ್ರಕರಣ: ಎನ್‌ಐಸಿಬಿ ಜನರಲ್ ಮ್ಯಾನೇಜರ್ ಸೆರೆ

Update: 2025-02-15 21:51 IST

PC : PTI 

ಮುಂಬೈ: 122 ಕೋ.ರೂ.ಗಳನ್ನು ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಮುಂಬೈ ಮೂಲದ ನ್ಯೂ ಇಂಡಿಯಾ ಕೋ-ಆಪರೇಟಿವ್ ಬ್ಯಾಂಕ್(ಎನ್‌ಐಸಿಬಿ)ನ ಜನರಲ್ ಮ್ಯಾನೇಜರ್ ಹಿತೇಶ್ ಮೆಹ್ತಾರನ್ನು ಪೋಲಿಸರು ಬಂಧಿಸಿದ್ದಾರೆ.

ವಿಶ್ವಾಸ ದ್ರೋಹ ಹಾಗೂ ಬ್ಯಾಂಕಿನ ಪ್ರಭಾದೇವಿ ಮತ್ತು ಗೋರೆಗಾಂವ್ ಶಾಖೆಗಳಲ್ಲಿ ಸೇಫ್ ಡಿಪಾಸಿಟ್ ಬಾಕ್ಸ್‌ಗಳಲ್ಲಿದ್ದ 122 ಕೋ.ರೂ.ಗಳನ್ನು ದುರುಪಯೋಗ ಮಾಡಿಕೊಂಡ ಆರೋಪದಲ್ಲಿ ಮೆಹ್ತಾ ಮತ್ತು ಅವರ ಸಹಚರರ ವಿರುದ್ಧ ಶನಿವಾರ ಬೆಳಗಿನ ಜಾವ ದಾದರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ನಂತರ ಅದನ್ನು ಆರ್ಥಿಕ ಅಪರಾಧಗಳ ಘಟಕಕ್ಕೆ ವರ್ಗಾಯಿಸಲಾಗಿತ್ತು ಎಂದು ಪೋಲಿಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಗದು ಹಣದ ಕೊರತೆಯ ಕಾರಣದಿಂದಾಗಿ ಆರ್‌ಬಿಐ ಶುಕ್ರವಾರ ಬ್ಯಾಂಕಿನ ಆಡಳಿತ ಮಂಡಳಿಯನ್ನು ವಜಾಗೊಳಿಸಿತ್ತು. ಬ್ಯಾಂಕು ಹೊಸ ಸಾಲಗಳನ್ನು ನೀಡುವುದನ್ನು,ಠೇವಣಿಗಳನ್ನು ಸ್ವೀಕರಿಸುವುದನ್ನು ಮತ್ತು ಗ್ರಾಹಕರು ತಮ್ಮ ಹಣ ಹಿಂದೆಗೆದುಕೊಳ್ಳುವುದನ್ನು ಆರ್‌ಬಿಐ ನಿರ್ಬಂಧಿಸಿದೆ. ಸಿಬ್ಬಂದಿಗಳಿಗೆ ವೇತನ ಪಾವತಿ ಮತ್ತು ವಿದ್ಯುತ್ ಬಿಲ್ ಪಾವತಿಯಂತಹ ಆಡಳಿತಾತ್ಮಕ ಕಾರ್ಯಾಚರಣೆಗಳನ್ನು ಮುಂದುವರಿಸಲು ಅದು ಅವಕಾಶ ನೀಡಿದೆ.

ಬ್ಯಾಂಕಿನ ವ್ಯವಹಾರಗಳನ್ನು ನೋಡಿಕೊಳ್ಳಲು ಮಾಜಿ ಎಸ್‌ಬಿಐ ಚೀಫ್ ಜನರಲ್ ಮ್ಯಾನೇಜರ್ ಶ್ರೀಕಾಂತ್ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು,ಆರ್‌ಬಿಐ 12 ತಿಂಗಳುಗಳ ಅವಧಿಗೆ ಬ್ಯಾಂಕಿನ ಆಡಳಿತವನ್ನು ನಿರ್ವಹಿಸಲಿದೆ. ಗ್ರಾಹಕರು ಐದು ಲ.ರೂ.ವರೆಗೆ ಠೇವಣಿ ವಿಮೆ ಹಕ್ಕನ್ನು ಮಂಡಿಸಬಹುದು ಎಂದೂ ಅದು ತಿಳಿಸಿದೆ.

ಶನಿವಾರ ಮುಂಬೈನಲ್ಲಿಯ ಬ್ಯಾಂಕಿನ ಕೆಲವು ಶಾಖೆಗಳಲ್ಲಿ ಹಣವನ್ನು ಹಿಂದೆಗೆದುಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News