×
Ad

ಹರ್ಯಾಣ: ನೂಹ್‌ನಲ್ಲಿ ಎರಡು ಮಸೀದಿಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ ದುಷ್ಕರ್ಮಿಗಳು; ವರದಿ

Update: 2023-08-03 14:13 IST

ಸಾಂದರ್ಭಿಕ ಚಿತ್ರ (PTI)

ನೂಹ್ (ಹರಿಯಾಣ): ಸತತ ಮೂರನೆಯ ದಿನವೂ ನೂಹ್ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಬುಧವಾರ ರಾತ್ರಿ ಕೂಡಾ ಕೆಲವು ಅಪರಿಚಿತ ದುಷ್ಕರ್ಮಿಗಳು ನೂಹ್ ಜಿಲ್ಲೆಯ ತೌರುವಿನಲ್ಲಿ ಎರಡು ಮಸೀದಿಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆನ್ನಲಾದ ಘಟನೆ ನಡೆದಿದೆ ಎಂದು scroll.in ವರದಿ ಮಾಡಿದೆ.

ನೂಹ್ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಲಾಗಿದ್ದರೂ, ಎರಡು ಮಸೀದಿಗಳ ಮೇಲಿನ ದಾಳಿಯು ಬೆಳಗ್ಗೆ 11.30 ಗಂಟೆಯ ವೇಳೆಗೆ ನಡೆದಿದೆ. ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲವೆಂದು scroll.in ಸುದ್ದಿ ಸಂಸ್ಥೆಗೆ ಪೊಲೀಸರು ತಿಳಿಸಿದ್ದಾರೆ. ಗುಂಪೊಂದು ವಿಶ್ವ ಹಿಂದೂ ಪರಿಷತ್ ಮೆರವಣಿಗೆಗೆ ತಡೆಯೊಡ್ಡಿದ ನಂತರ, ನೂಹ್ ಜಿಲ್ಲೆಯು ಕಳೆದ ಸೋಮವಾರದಿಂದ ಹೊತ್ತಿ ಉರಿಯುತ್ತಿದೆ.

ಈ ಹಿಂಸಾಚಾರವು ನೆರೆಯ ಜಿಲ್ಲೆಗಳಿಗೂ ಹಬ್ಬಿರುವುದರಿಂದ ಹರಿಯಾಣದಲ್ಲಿ ಈವರೆಗೆ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ. ಗುರುಗ್ರಾಮದಲ್ಲಿ ಮಸೀದಿಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ಆ ಮಸೀದಿಯ ಇಮಾಂ ಒಬ್ಬರನ್ನು ಹತ್ಯೆಗೈಯ್ಯಲಾಗಿದೆ. ಈ ಹಿಂಸಾಚಾರದಲ್ಲಿ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಮುಸ್ಲಿಂ ಕುಟುಂಬಗಳಿಗೆ ಸೇರಿದ ಅಂಗಡಿ ಹಾಗೂ ಗುಡಿಸಲುಗಳು ಅಗ್ನಿಗಾಹುತಿಯಾಗಿರುವುದರಿಂದ, ನೂರಾರು ಮಂದಿ ತಮ್ಮ ಮನೆಗಳನ್ನು ತೊರೆಯುವಂತಾಗಿದೆ.

ಬುಧವಾರ ರಾತ್ರಿ ಮೋಟರ್ ಬೈಕ್ ಮೇಲೆ ಬಂದಿದ್ದ ದಾಳಿಕೋರರು, ನೂಹ್‌ನಲ್ಲಿನ ಎರಡು ಮಸೀದಿಗಳ ಮೇಲೆ ಕಚ್ಚಾ ಪೆಟ್ರೋಲ್ ಬಾಂಬ್ ಎಸೆದಿದ್ದರಿಂದ ಸಣ್ಣಪುಟ್ಟ ಹಾನಿಯಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳನ್ನು ರವಾನಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಅದು ವರದಿ ಮಾಡಿದೆ.

ಹೀಗಿದ್ದೂ, ಗುರುವಾರ ಯಾರೂ ಶಸ್ತ್ರಾಸ್ತ್ರ ಬಳಸಿದ್ದು ನಮಗೆ ಕಂಡು ಬರಲಿಲ್ಲವೆಂದು ತೌರು ಪೊಲೀಸ್ ಠಾಣೆಯ ಠಾಣಾಧಿಕಾರಿ scroll.in ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ಕೂಡಾ ದಾಖಲಾಗಿಲ್ಲವೆಂದು ಅವರು ಹೇಳಿದ್ದಾರೆ. ಈ ಘಟನೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಹಾನಿಯಾಗಿಲ್ಲ ಹಾಗೂ ಮಸೀದಿಯಲ್ಲಿನ ನೆಲಹಾಸು ಮಾತ್ರ ಭಾಗಶಃ ಸುಟ್ಟಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News