×
Ad

ದಲಿತ ಯುವಕರನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಮೂತ್ರ ವಿಸರ್ಜಿಸಿದ ದುಷ್ಕರ್ಮಿಗಳು

Update: 2023-11-02 18:35 IST

ಸಾಂದರ್ಭಿಕ ಚಿತ್ರ Photo- PTI

ತಿರುನೆಲ್ವೇಲಿ: ಇಬ್ಬರು ದಲಿತ ಯುವಕರನ್ನು ವಿವಸ್ತ್ರಗೊಳಿಸಿ ಅವರ ಮೇಲೆ ಮೂತ್ರ ವಿಸರ್ಜಿಸಿದ ನಂತರ ಅವರಲ್ಲಿದ್ದ ನಗದು ಮತ್ತು ಮೊಬೈಲ್‌ ಫೋನ್‌ಗಳನ್ನು ಕಸಿದ ಆರೋಪದ ಮೇಲೆ ತಿರುನೆಲ್ವೇಲಿ ಪೊಲೀಸರು ಮಂಗಳವಾರ ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದ ಆರು ಜನರನ್ನು ಬಂಧಿಸಿದ್ದಾರೆ. ಈ ಆಘಾತಕಾರಿ ಘಟನೆ ಸೋಮವಾರ ರಾತ್ರಿ ಥಾಮಿರಬರಣಿ ನದಿ ದಂಡೆ ಪ್ರದೇಶದಲ್ಲಿ ನಡೆದಿತ್ತು.

ಸಂತ್ರಸ್ತ ಯುವಕರಾದ ಎಸ್‌ ಮನೋಜ್‌ ಕುಮಾರ್‌ (21) ಹಾಗೂ ಎಸ್‌ ಮರಿಯಪ್ಪನ್‌ (19) ತಿರುನೆಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸೋಮವಾರ ರಾತ್ರಿ ಸುಮಾರು 7.30ಕ್ಕೆ ತಾವು ಸ್ನಾನ ಮಾಡಲೆಂದು ನದಿ ದಂಡೆ ಪ್ರದೇಶಕ್ಕೆ ತೆರಳಿದ್ದ ಸಂದರ್ಭ ಒಂದು ಗುಂಪು ತಮ್ಮ ಮೇಲೆ ದಾಳಿ ನಡೆಸಿತು. ತಾವು ದಲಿತರೆಂದು ತಿಳಿದ ನಂತರ ಇನ್ನಷ್ಟು ಕ್ರೌರ್ಯ ಮೆರೆದು, ತಮ್ಮನ್ನು ವಿವಸ್ತ್ರಗೊಳಿಸಿ ತಮ್ಮ ಮೇಲೆ ಮೂತ್ರ ಹೊಯ್ದರು ಎಂದು ಅವರು ಆರೋಪಿಸಿದ್ಧಾರೆ. ತಮ್ಮ ಬಳಿ ಇದ್ದ ಬೆಳ್ಳಿಯ ಆಭರಣ ಮತ್ತು ಮೊಬೈಲ್‌ ಫೋನ್‌ ಕೂಡ ಸೆಳೆದಿದ್ದಾರೆ ಎಂದು ಅವರು ದೂರಿದ್ದಾರೆ.

ದುಷ್ಕರ್ಮಿಗಳು ಹಣಕ್ಕೂ ಬೇಡಿಕೆಯಿದ್ದುದರಿಂದ ಸಂತ್ರಸ್ತರಲ್ಲೊಬ್ಬಾತ ತನ್ನ ಉದ್ಯೋಗದಾತರನ್ನು ಸಂಪರ್ಕಿಸಿ ರೂ. 5000 ಕಳುಹಿಸಲು ಹೇಳಿದ್ದರೆಂದು ಅವರು ತಿಳಿಸಿದ್ದಾರೆ. ರಾತ್ರಿ 7.45ರಿಂದ ಮುಂಜಾನೆ 1 ಗಂಟೆ ತನಕ ಕಿರುಕುಳ ನೀಡಿದ ಆರೋಪಿಗಳು ನಂತರ ಸಂತ್ರಸ್ತರಲ್ಲೊಬ್ಬರ ಬೈಕಿನಲ್ಲಿ ಹತ್ತಿರದ ಎಟಿಎಂಗೆ ಹೋಗಿ ಅವರ ಖಾತೆಯಿಂದ ಹಣ ವಿದ್‌ಡ್ರಾ ಮಾಡಿದ್ದರೆಂದು ಆರೋಪಿಸಲಾಗಿದೆ.

ಸಂತ್ರಸ್ತರು ನಂತರ ಅವರ ಕೈಯ್ಯಿಂದ ಹೇಗೋ ತಪ್ಪಿಸಿಕೊಂಡು ಮನೆ ತಲುಪಿದ್ದರು ಎಂದು ವರದಿಯಾಗಿದೆ.

ಬಂಧಿತರನ್ನು ಪೊನ್ಮಣಿ, ನಲ್ಲಮುತ್ತು, ಆಯಿರಂ, ರಮರ್‌, ಲಕ್ಷ್ಮಣನ್‌ ಮತ್ತು ಶಿವ ಎಂದು ಗುರುತಿಸಲಾಗಿದ್ದು ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News