ಐಎಎಸ್ ಅಧಿಕಾರಿಗಳನ್ನು ʼರಥ ಪ್ರಭಾರಿʼಗಳನ್ನಾಗಿಸುವ ಕೇಂದ್ರದ ಪ್ರಸ್ತಾವನೆಗೆ ಚುನಾವಣಾ ಆಯೋಗ ವಿರೋಧ; ನೋಟಿಸ್ ಜಾರಿ
ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಐಎಎಸ್ ಅಧಿಕಾರಿಗಳನ್ನು “ರಥ ಪ್ರಭಾರಿಗಳು” ಎಂದು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕರೆದಿರುವುದಕ್ಕೆ ಚುನಾವಾಣಾ ಆಯೋಗ ಆಕ್ಷೇಪಿಸಿ ನೋಟಿಸ್ ಜಾರಿಗೊಳಿಸಿದ್ದು ಮಾದರಿ ನೀತಿ ಸಂಹಿತೆಯು ಡಿಸೆಂಬರ್ 5ರ ತನಕ ಜಾರಿಯಲ್ಲಿರುವ ಕ್ಷೇತ್ರಗಳಲ್ಲಿ ಇಂತಹ ಚಟುವಟಿಕೆಗಳಿಗೆ ಆಸ್ಪದವಿಲ್ಲ ಎಂದು ಹೇಳಿದೆ.
“ನವೆಂಬರಿನಲ್ಲಿ ಆರಂಭಗೊಳ್ಳಲಿರುವ ಪ್ರಸ್ತಾವಿತ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಗಾಗಿ ಹಿರಿಯ ಅಧಿಕಾರಿಗಳನ್ನು “ಜಿಲ್ಲಾ ರಥ ಪ್ರಭಾರಿಗಳು” ಎಂದು ನೇಮಕಗೊಳಿಸುವ ಕುರಿತಂತೆ ಸುತ್ತೋಲೆಯನ್ನು ಹೊರಡಿಸಿರುವ ಕುರಿತು ಆಯೋಗದ ಗಮನಕ್ಕೆ ಬಂದಿದೆ, ಆದರೆ ಈ ಚಟುವಟಿಕೆಗಳನ್ನು ನೀತಿ ಸಂಹಿತೆ ಜಾರಿಯಲ್ಲಿರುವ ಸ್ಥಳಗಳಲ್ಲಿ ನಡೆಸಲಾಗದು ಎಂದು ಆಯೋಗ ಹೇಳಿದೆ.
ಅಧಿಕಾರಿಗಳನ್ನು ರಥ ಪ್ರಭಾರಿಗಳು ಎಂದು ಕರೆಯುವುದಕ್ಕೆ ಕೇಳಿ ಬಂದ ಆಕ್ಷೇಪಗಳ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರ ಪ್ರತಿಕ್ರಿಯಿಸಿ ಈ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳು ಎಂದು ಕರೆಯಲಾಗುವುದು ಎಂದು ಹೇಳಿದರು.