×
Ad

ಟ್ರಂಪ್ ಸೂಚನೆಯ ಐದು ತಾಸಿನೊಳಗೆ ಪಾಕ್ ವಿರುದ್ಧ ಯುದ್ಧ ನಿಲ್ಲಿಸಿದ ಮೋದಿ: ರಾಹುಲ್ ಗಾಂಧಿ ಆರೋಪ

Update: 2025-08-27 17:39 IST

ರಾಹುಲ್ ಗಾಂಧಿ (Photo: PTI)

ಮುಜಾಫರ್‌ಪುರ (ಬಿಹಾರ): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಸೂಚನೆಯ ಐದು ತಾಸಿನೊಳಗೆ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧದ ಯುದ್ಧವನ್ನು ನಿಲ್ಲಿಸಿದ್ದರು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರ ಆರೋಪ ಮಾಡಿದ್ದಾರೆ.

ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ರಾಹುಲ್ ಗಾಂಧಿ ನಡೆಸುತ್ತಿರುವ ‘ಮತದಾರರ ಹಕ್ಕು ಯಾತ್ರೆ’ ಯ ಅಂಗವಾಗಿ ಮುಜಾಫರ್‌ಪುರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಶ್ವೇತಭವನದಲ್ಲಿ ಟ್ರಂಪ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದರು.

"ಟ್ರಂಪ್ ಇಂದು ಏನು ಹೇಳಿದ್ದಾರೆ ನಿಮಗೆ ಗೊತ್ತೇ? ಪಾಕಿಸ್ತಾನದೊಂದಿಗೆ ಮಿಲಿಟರಿ ಸಂಘರ್ಷ ಮುಂದುವರಿದಾಗ, ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ 24 ತಾಸಿನೊಳಗೆ ಯುದ್ಧ ನಿಲ್ಲಿಸುವಂತೆ ಸೂಚನೆ ನೀಡಿದ್ದಾಗಿ ಟ್ರಂಪ್ ಹೇಳಿದ್ದಾರೆ. ಮೋದಿ ಅವರಿಗೆ 24 ಗಂಟೆಗಳ ಅವಧಿ ನೀಡಲಾಗಿದ್ದರೂ, ಕೇವಲ ಐದು ತಾಸಿನೊಳಗೆ ಯುದ್ಧ ನಿಲ್ಲಿಸಿದರು" ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಟ್ರಂಪ್ ಹಲವಾರು ಬಾರಿ, “ಭಾರತ-ಪಾಕಿಸ್ತಾನ ನಡುವಿನ ಯುದ್ಧವನ್ನು ನನ್ನ ಮಧ್ಯಸ್ಥಿಕೆಯಲ್ಲಿ ಕೊನೆಗೊಳಿಸಲಾಗಿದೆ” ಎಂದು ಹೇಳಿಕೆ ನೀಡಿದರೂ, ಕೇಂದ್ರ ಸರ್ಕಾರವು ಮೂರನೇ ರಾಷ್ಟ್ರದ ಯಾವುದೇ ಮಧ್ಯಸ್ಥಿಕೆಯನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಅಮೆರಿಕ ಅಥವಾ ಬೇರೆ ಯಾವ ದೇಶದ ಹಸ್ತಕ್ಷೇಪವಿಲ್ಲದೆ, ಭಾರತ ಹಾಗೂ ಪಾಕಿಸ್ತಾನ ಸೇನೆಗಳ ನೇರ ಮಾತುಕತೆಯ ಮೂಲಕವೇ ಯುದ್ಧ ಕೊನೆಗೊಂಡಿದೆ ಎಂದು ಸರ್ಕಾರದ ಸ್ಪಷ್ಟನೆ ನೀಡಿದೆ.

“ಚುನಾವಣಾ ಆಯೋಗದ ಸಹಕಾರದೊಂದಿಗೆ ಬಿಜೆಪಿ ಮತ ಕಳ್ಳತನ ನಡೆಸುತ್ತಿದೆ” ಎಂದು ಅವರು ಆರೋಪಿಸಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಪುರಾವೆಗಳನ್ನು ಬಹಿರಂಗಪಡಿಸುವುದಾಗಿ ರಾಹುಲ್ ಗಾಂಧಿ ಘೋಷಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News