×
Ad

ಪರಿಶಿಷ್ಟ ಪಂಗಡಗಳ ಪಟ್ಟಿಗೆ ಮೈತೈ ಸಮುದಾಯದ ಸೇರ್ಪಡೆಗೆ ನಿರ್ದೇಶನ ನೀಡುವ ಮಣಿಪುರ ಹೈಕೋರ್ಟ್ ನ ಆದೇಶ ಬದಲಾವಣೆ

Update: 2024-02-22 21:19 IST

ಮಣಿಪುರ ಹೈಕೋರ್ಟ್ | Photo: PTI 

ಇಂಫಾಲ: ಪರಿಶಿಷ್ಟ ಪಂಗಡಗಳ ಪಟ್ಟಿಗೆ ಮೈತೈ ಸಮುದಾಯವನ್ನು ಸೇರ್ಪಡೆಗೊಳಿಸುವ ಬಗ್ಗೆ ಪರಿಗಣಿಸುವಂತೆ ಮಣಿಪುರ ಸರಕಾರಕ್ಕೆ ನೀಡುವ ನಿರ್ದೇಶನವನ್ನು ಒಳಗೊಂಡ ಪ್ಯಾರಾಗ್ರಾಫನ್ನು ಮಣಿಪುರ ಹೈಕೋರ್ಟ್ ಬುಧವಾರ ತನ್ನ ಆದೇಶದಿಂದ ತೆಗೆದು ಹಾಕಿದೆ.

ಆ ಆದೇಶವನ್ನು ಹೈಕೋರ್ಟ್ ಕಳೆದ ವರ್ಷದ ಮಾರ್ಚ್ 27ರಂದು ನೀಡಿತ್ತು ಹಾಗೂ ಎಪ್ರಿಲ್ ನಲ್ಲಿ ಅದನ್ನು ಬಹಿರಂಗಪಡಿಸಲಾಗಿತ್ತು. ಮಣಿಪುರದಲ್ಲಿ ಮೈತೈ ಸಮುದಾಯ ಮತ್ತು ಕುಕಿ-ಝೋ ಬುಡಕಟ್ಟು ಸಮುದಾಯಗಳ ನಡುವೆ ಸಂಘರ್ಷ ಸ್ಫೋಟಗೊಳ್ಳಲು ಆ ತೀರ್ಪು ಪ್ರಮುಖ ಕಾರಣವಾಗಿತ್ತು. ಮೇ 3ರಂದು ಸ್ಫೋಟಗೊಂಡ ಹಿಂಸಾಚಾರಕ್ಕೆ ಈವರೆಗೆ 200ಕ್ಕಿಂತಲೂ ಹೆಚ್ಚು ಜನರು ಬಲಿಯಾಗಿದ್ದಾರೆ. 60,000ಕ್ಕೂ ಹೆಚ್ಚು ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ.

ಮಾರ್ಚ್ 27ರ ಆದೇಶವನ್ನು ಆಗ ಮಣಿಪುರ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿದ್ದ ಎಮ್.ವಿ. ಮುರಳೀಧರನ್ ರ ಏಕ ಸದಸ್ಯ ಪೀಠವು ನೀಡಿತ್ತು. ಮೈತೈ ಟ್ರೈಬ್ಸ್ ಯೂನಿಯನ್ ನ ಸದಸ್ಯರು ಸಲ್ಲಿಸಿದ ಅರ್ಜಿಯೊಂದರ ವಿಚಾರಣೆ ನಡೆಸಿದ ಅವರು ಆ ಆದೇಶವನ್ನು ಹೊರಡಿಸಿದ್ದರು.

ಮೇ 3ರಂದು, ಸರ್ವ ಮಣಿಪುರ ಬುಡಕಟ್ಟು ಸಂಘದ ನೇತೃತ್ವದಲ್ಲಿ ಹಲವಾರು ಸಂಘಟನೆಗಳು ಹೈಕೋರ್ಟ್ಗೆ ಮನವಿ ಸಲ್ಲಿಸಿ, ಈ ಆದೇಶವನ್ನು ಪ್ರಶ್ನಿಸಿ ತೃತೀಯ ಪಕ್ಷದ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವಂತೆ ಕೋರಿದ್ದವು.

ಬಳಿಕ, ಮೂಲ ಮೈತೈ ಅರ್ಜಿದಾರರು ಕೂಡ ಮರುಪರಿಶೀಲನಾ ಅರ್ಜಿಯೊಂದನ್ನು ಸಲ್ಲಿಸಿ, ಮೈತೈ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸುವುದನ್ನು ಕ್ಷಿಪ್ರವಾಗಿ ಪರಿಗಣಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡುವ 17(iii) ಪ್ಯಾರಾಗ್ರಾಫನ್ನು ಮಾತ್ರ ಮಾರ್ಪಡಿಸಬೇಕು ಎಂದು ಕೋರಿದ್ದರು. ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಬುಡಕಟ್ಟು ಪಂಗಡಗಳಿಗೆ ಅವಕಾಶ ನೀಡಬಾರದು ಎಂಬುದಾಗಿಯೂ ಮೈತೈ ಅರ್ಜಿದಾರರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ಹೈಕೋರ್ಟ್ ಆದೇಶವು ‘‘ವಾಸ್ತವಾಂಶಗಳ ಆಧಾರದಲ್ಲಿ ಸಂಪೂರ್ಣ ತಪ್ಪಾಗಿದೆ’’ ಎಂದು ಮೇ 17ರಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆ ಬಳಿಕ, ಬುಡಕಟ್ಟು ಸಂಘಟನೆಗಳು ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದವು.

ಬುಧವಾರ, ಮಣಿಪುರ ಹೈಕೋರ್ಟ್ನ ನ್ಯಾಯಾಧೀಶ ಗೋಲ್ಮೈ ಗೈಫುಲ್ಶಿಲು, ಈ ನ್ಯಾಯಾಲಯದ ಹಿಂದಿನ ಆದೇಶದಲ್ಲಿರುವ ಪ್ಯಾರಾಗ್ರಾಫನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ‘‘ಏಕ ನ್ಯಾಯಾಧೀಶ ಪೀಠವು 27.03.2023ರಂದು ನೀಡಿರುವ ಆದೇಶದ 17(iii) ಪ್ಯಾರಾಗ್ರಾಫನ್ನು ಮರುಪರಿಶೀಲಿಸುವ ಅಗತ್ಯವು ನನಗೆ ಮನವರಿಕೆಯಾಗಿದೆ. ಆ ನಿರ್ದೇಶನವು ಸುಪ್ರೀಂ ಕೋರ್ಟ್ ನ ಸಂವಿಧಾನ ಪೀಠದ ಅಭಿಪ್ರಾಯಕ್ಕೆ ವಿರುದ್ಧವಾಗಿದೆ’’ ಎಂದು ನ್ಯಾಯಾಧೀಶರು ತಿಳಿಸಿದರು.

ಮಣಿಪುರ ಹೈಕೋರ್ಟ್ ನ ಮಾರ್ಚ್ 27ರ ಇಡೀ ಆದೇಶವನ್ನು ಪ್ರಶ್ನಿಸಿ ಬುಡಕಟ್ಟು ಸಂಘಟನೆಗಳು ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ಅಕ್ಟೋಬರ್ 19ರಂದು ವಿಚಾರಣೆಗೆ ಅಂಗೀಕರಿಸಿದೆ. ಅದು ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿಯಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಮೇತೈ ಸಮುದಾಯದವರ ಪ್ರಮಾಣ 60 ಶೇಕಡದಷ್ಟಿದೆ. ಅವರು ಹೆಚ್ಚಾಗಿ ಇಂಫಾಲ ಕಣಿವೆಯಲ್ಲಿ ನೆಲೆಸಿದ್ದಾರೆ. ಮಣಿಪುರದ ಪ್ರಮುಖ ಬುಡಕಟ್ಟು ಸಮುದಾಯಗಳಾದ ಕುಕಿ ಮತ್ತು ನಾಗಾಗಳು ಬೆಟ್ಟ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

ಮೈತೈ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಿದರೆ, ಆ ಸಮುದಾಯದ ಜನರು ಬೆಟ್ಟ ಪ್ರದೇಶಗಳಲ್ಲಿ ಜಮೀನು ಖರೀದಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News