×
Ad

ಹಣ ಅಕ್ರಮ ವರ್ಗಾವಣೆ ಪ್ರಕರಣ | ಈಡಿಯಿಂದ ಸುರೇಶ್ ರೈನಾ, ಶಿಖರ್ ಧವನ್‌ ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಸೊತ್ತು ಮುಟ್ಟುಗೋಲು

Update: 2025-11-06 20:54 IST

 ಸುರೇಶ್ ರೈನಾ ,  ಶಿಖರ್ ಧವನ್‌ | Photo Credit : PTI

ಹೊಸದಿಲ್ಲಿ, ನ. 6: ಬೆಟ್ಟಿಂಗ್‌ಗೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಭಾರತದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಶಿಖರ್ ಧವನ್‌ ಗೆ ಸೇರಿದ 11.14 ಕೋಟಿ ರೂ. ಮೌಲ್ಯದ ಸೊತ್ತನ್ನು ಜಾರಿ ನಿರ್ದೇಶನಾಲಯ (ಈಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಈ ಹಿಂದೆ ಜಾರಿ ನಿರ್ದೇಶನಾಲಯ ಬೆಟ್ಟಿಂಗ್ ವೆಬ್‌ಸೈಟ್ 1xಬೆಟ್‌ಗೆ ನಂಟು ಹೊಂದಿದ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿ ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್‌ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿತ್ತು.

39 ವರ್ಷದ ಶಿಖರ್ ಧವನ್ ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗುವುದು ಎಂದು ಅದು ತಿಳಿಸಿದೆ.

1xಬೆಟ್‌ ನೊಂದಿಗೆ ಧವನ್ ಅವರ ಸಂಭಾವ್ಯ ನಂಟಿನ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಬೆಟ್ಟಿಂಗ್ ಆ್ಯಪ್ ಬಳಕೆದಾರರನ್ನು ವಂಚಿಸುವ ಹಾಗೂ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚಿಸುವ ಆರೋಪವನ್ನು ಎದುರಿಸುತ್ತಿದೆ.

ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ವೆಬ್‌ಸೈಟ್‌ ಗಳ ವಿರುದ್ಧದ ಕಠಿಣ ಕ್ರಮದ ಭಾಗವಾಗಿ ಈ ತನಿಖೆ ನಡೆಯುತ್ತಿದೆ. ಈ ವೆಬ್‌ಸೈಟ್‌ ಗಳಲ್ಲಿ ನಕಲಿ ಯೋಜನೆಗಳನ್ನು ನಡೆಸುವುದು ಹಾಗೂ ಅಕ್ರಮವಾಗಿ ದೊಡ್ಡ ಪ್ರಮಾಣದ ಹಣವನ್ನು ವರ್ಗಾಯಿಸುವ ಆರೋಪಗಳ ಕುರಿತು ಪರಿಶೀಲಿಸಲಾಗುತ್ತಿದೆ.

ಇದೇ ಪ್ರಕರಣದ ಕುರಿತಂತೆ ಭಾರತದ ಮಾಜಿ ಬ್ಯಾಟ್ಸ್‌ ಮ್ಯಾನ್ ಸುರೇಶ್ ರೈನಾ ಅವರನ್ನು ಕೂಡ ಜಾರಿ ನಿರ್ದೇಶನಾಲಯ ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿತ್ತು. ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ಭಾರತಕ್ಕಾಗಿ ಆಡಿದ 38 ವರ್ಷದ ರೈನಾ ಅವರ ಬೆಟ್ಟಿಂಗ್ ಆ್ಯಪ್ ಪ್ರಚಾರ ಚಟುವಟಿಕೆಗಳ ಕುರಿತು ತನಿಖೆ ನಡೆಸಲಾಗಿದೆ.

ಜಾರಿ ನಿರ್ದೇಶನಾಲಯ ಟೆಕ್ ಕಂಪೆನಿಗಳಾದ ಗೂಗಲ್ ಹಾಗೂ ಮೆಟಾದ ಪ್ರತಿನಿಧಿಗಳನ್ನು ವಿಚಾರಣೆ ನಡೆಸುವುದರೊಂದಿಗೆ ಈ ಪ್ರಕರಣದ ತನಿಖೆ ಕ್ರಿಕೆಟಿಗರನ್ನು ಮೀರಿ ವಿಸ್ತರಿಸಿದೆ. ಪರಿಮ್ಯಾಚ್ ಎಂದು ಕರೆಯಲಾಗುವ ಇನ್ನೊಂದು ಬೆಟ್ಟಿಂಗ್ ಆ್ಯಪ್ ಅನ್ನು ಗುರಿಯಾಗಿರಿಸಿ ಕೂಡ ಜಾರಿ ನಿರ್ದೇಶನಾಲಯ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿತ್ತು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News