×
Ad

ಫೋರ್ಬ್ಸ್ ಇಂಡಿಯಾದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡ ಮುಕೇಶ್ ಅಂಬಾನಿ

Update: 2024-10-10 17:35 IST

ಮುಕೇಶ್ ಅಂಬಾನಿ (Photo: PTI)

ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಮುಕೇಶ್ ಅಂಬಾನಿಯವರು 2024ನೇ ಸಾಲಿಗೆ ಫೋರ್ಬ್ಸ್‌ನ 100 ಅತ್ಯಂತ ಶ್ರೀಮಂತ ಭಾರತೀಯ ಉದ್ಯಮಿಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಈ ವರ್ಷ ದೇಶದ ಅತ್ಯಂತ ಶ್ರೀಮಂತರ ಒಟ್ಟು ನಿವ್ವಳ ಮೌಲ್ಯ ಇದೇ ಮೊದಲ ಬಾರಿಗೆ ಒಂದು ಲಕ್ಷ ಕೋಟಿ ಡಾಲರ್‌ಗಳನ್ನು ದಾಟಿದೆ.

ಡಾಲರ್ ಲೆಕ್ಕದಲ್ಲಿ ಎರಡನೇ ಅತಿ ದೊಡ್ಡ ಗಳಿಕೆದಾರರಾಗಿದ್ದ ಅಂಬಾನಿಯವರ ಸಂಪತ್ತು ಕಳೆದೊಂದು ವರ್ಷದಲ್ಲಿ 27.5 ಬಿಲಿಯನ್ (ಶತಕೋಟಿ) ಡಾಲರ್ ಗಳ ಏರಿಕೆಯೊಂದಿಗೆ 119.5 ಬಿಲಿಯನ್ ಡಾಲರ್ ಗೆ ತಲುಪಿತ್ತು ಎಂದು ಫೋರ್ಬ್ಸ್ ಮ್ಯಾಗಝಿನ್ ತನ್ನ ಅ.9ರ ವರದಿಯಲ್ಲಿ ತಿಳಿಸಿದೆ.

ಅಂಬಾನಿ ಪ್ರಸ್ತುತ 108.3 ಬಿ‌ಲಿಯನ್ ಡಾ‌ಲರ್ ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದು,‌ ವಿಶ್ವದಲ್ಲಿ 13ನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

ಗಮನಾರ್ಹವಾಗಿ, 2024ರ ಫೋರ್ಬ್ಸ್ ಪಟ್ಟಿಯಲ್ಲಿನ ಅಗ್ರ 100 ಶ್ರೀಮಂತರ ಒಟ್ಟು ಸಂಪತ್ತು ಒಂದು ಲಕ್ಷ ಕೋಟಿ ಡಾಲರ್ ಗಳ ಐತಿಹಾಸಿಕ ಮೈಲುಗಲ್ಲನ್ನು ದಾಟಿದೆ. 2023ರಲ್ಲಿ 799 ಬಿಲಿಯನ್ ಡಾಲರ್ ಗಳಿದ್ದ ಈ ಶ್ರೀಮಂತರ ಒಟ್ಟು ಸಂಪತ್ತು 2024ರಲ್ಲಿ 1.1 ಲಕ್ಷ ಕೋಟಿ ಡಾಲರ್ ಗೆ ಜಿಗಿದಿದೆ.

ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ ಅದಾನಿಯವರು 116 ಬಿ‌ಲಿಯನ್ ಡಾಲರ್ ಗಳ ಒಟ್ಟು ಕುಟುಂಬ ಆಸ್ತಿಯೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿರುವ ಜಿಂದಾಲ್ ಗ್ರೂಪ್‌ನ ಸಾವಿತ್ರಿ ಜಿಂದಾಲ್ 43.57 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮೊದಲ ಬಾರಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.

ಶಿವ ನಾಡಾರ್(40.2 ಬಿಲಿಯನ್ ಡಾಲರ್),‌ ದಿಲೀಪ ಸಾಂಘ್ವಿ (32.4 ಬಿಲಿಯನ್ ಡಾಲರ್), ರಾಧಾಕೃಷ್ಣ ದಮಾನಿ(31.5 ಬಿಲಿಯನ್ ಡಾಲರ್), ಸುನೀಲ ಮಿತ್ತಲ್(30.7 ಬಿಲಿಯನ್ ಡಾಲರ್),ಕುಮಾರ ಬಿರ್ಲಾ(24.8 ಬಿಲಿಯನ್ ಡಾಲರ್),ಸೈರಸ್ ಪೂನಾವಾಲಾ(24.5 ಬಿಲಿಯನ್ ಡಾಲರ್) ಮತ್ತು ಬಜಾಜ್ ಕುಟುಂಬ (23.4 ಬಿಲಿಯನ್ ಡಾಲರ್) ಸಂಪತ್ತಿನೊಂದಿಗೆ ಅಗ್ರ 10 ಅತ್ಯಂತ ಶ್ರೀಮಂತ ವ್ಯಕ್ತಿಗಳು/ಕುಟುಂಬಗಳ ಗುಂಪಿನಲ್ಲಿರುವ ಇತರ ಉದ್ಯಮಿಗಳಾಗಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News