×
Ad

ಬಿಹಾರದಲ್ಲಿ ಮಹಾಘಟಬಂಧನದ ಹೊಸ ಉಪಮುಖ್ಯಮಂತ್ರಿ ಅಭ್ಯರ್ಥಿ ಮುಖೇಶ್ ಸಹಾನಿ ಯಾರು?

ಶಾಸಕರೇ ಇಲ್ಲದ ಪಕ್ಷದ ನಾಯಕ ಸಹಾನಿ!

Update: 2025-10-23 17:18 IST

ಮುಖೇಶ್ ಸಹಾನಿ - PC: ANI

ಪಾಟ್ನಾ: ಬಿಹಾರ ರಾಜಕೀಯದ ಹೊಸ ಮುಖವಾಗಿ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಅಧ್ಯಕ್ಷ ಮುಖೇಶ್ ಸಹಾನಿ ಅವರನ್ನು ಮಹಾಘಟಬಂಧನವು ತನ್ನ ಉಪಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ.

ಶಾಸಕರಿಲ್ಲದ ಪಕ್ಷದ ನಾಯಕರಾದ ಸಹಾನಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ಪತ್ರಿಕಾಗೋಷ್ಠಿಯಲ್ಲಿಯೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

ತನ್ನನ್ನು “ಮಲ್ಲಾಹ್‌ನ ಮಗ” (ಮಲ್ಲಾಹ್‌ - ಮೀನುಗಾರರ ಮತ್ತು ಅಂಬಿಗ ಸಮುದಾಯ) ಎಂದು ಕರೆಸಿಕೊಳ್ಳಲು ಇಷ್ಟಪಡುವ ಸಹಾನಿ ಬಿಹಾರದ ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಮತದಾರರನ್ನು ಸೆಳೆಯುವ ಮಹಾಘಟಬಂಧನದ ಪ್ರಮುಖ ತಂತ್ರದ ಭಾಗವಾಗಿದ್ದಾರೆ. ರಾಜ್ಯದ ಒಟ್ಟು ಮತದಾರರಲ್ಲಿ ಸುಮಾರು 30% EBCಗಳೇ ಆಗಿದ್ದು, ನಿಶಾದ್ ಸಮುದಾಯದ ಮತಗಳು ಚುನಾವಣಾ ಸಮೀಕರಣದಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ.

ದರ್ಭಂಗಾ ಜಿಲ್ಲೆಯ ಸುಪೌಲ್ ಬಝಾರ್ ಮೂಲದ 44 ವರ್ಷದ ಸಹಾನಿ, ಎಂಟನೇ ತರಗತಿವರೆಗೂ ಮಾತ್ರ ಶಿಕ್ಷಣ ಪಡೆದಿದ್ದಾರೆ. ಬಾಲಿವುಡ್‌ನಲ್ಲಿ ಕನಸು ಸಾಕಾರಗೊಳಿಸಲು 19ನೇ ವಯಸ್ಸಿನಲ್ಲಿ ಮುಂಬೈಗೆ ತೆರಳಿದ ಅವರು, ಅಲ್ಲಿ ಮುಖೇಶ್ ಸಿನಿ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ಸ್ಥಾಪಿಸಿದರು. ಈ ಕಂಪೆನಿಯು ಶಾರುಖ್ ಖಾನ್ ಅಭಿನಯದ ‘ದೇವದಾಸ್’ (2002) ಮತ್ತು ಸಲ್ಮಾನ್ ಖಾನ್ ಅಭಿನಯದ ‘ಬಜರಂಗಿ ಭಾಯಿಜಾನ್’ (2015) ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳ ಸೆಟ್ ವಿನ್ಯಾಸ ಮಾಡಿದೆ.

ಚಿತ್ರರಂಗದಲ್ಲಿ ಯಶಸ್ಸು ಕಂಡ ಸಹಾನಿ, ನಂತರ ತಮ್ಮ ಸಮುದಾಯದ ಅಭಿವೃದ್ಧಿಗೆ ಕೈ ಹಾಕಿದರು. 2008ರಲ್ಲಿ ಆಯೋಜಿಸಿದ ಭವ್ಯ ಛತ್ ಪೂಜಾ ಕಾರ್ಯಕ್ರಮದ ಬಳಿಕ ಜನಪ್ರಿಯತೆ ಗಳಿಸಿದ ಅವರು, 2010ರಲ್ಲಿ ಸಹಾನಿ ಸಮಾಜ ಕಲ್ಯಾಣ ಸಂಸ್ಥೆ ಸ್ಥಾಪಿಸಿದರು. ಇದರ ಮೂಲಕ ಬಿಹಾರದ ನದಿ ತೀರ ಪ್ರದೇಶದ ನಿಶಾದ್ ಸಮುದಾಯದ ಬೆಂಬಲವನ್ನು ಅವರು ಗಳಿಸಿದರು.

ನಿಶಾದ್ ಅವರ ರಾಜಕೀಯ ಪಯಣ 2015ರಲ್ಲಿ ಪ್ರಾರಂಭವಾಯಿತು. ಬಿಜೆಪಿ ಅವರ ಸಾಮರ್ಥ್ಯವನ್ನು ಗುರುತಿಸಿ ಚುನಾವಣಾ ಪ್ರಚಾರಕರಾಗಿ ನೇಮಿಸಿದರೂ, ನಿಶಾದ್ ಸಮುದಾಯವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರಿಸುವ ಬೇಡಿಕೆ ಈಡೇರದ ಕಾರಣ ಅವರು ಪಕ್ಷದಿಂದ ದೂರವಾದರು. ನಂತರ 2018ರಲ್ಲಿ ವಿಕಾಸಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಸ್ಥಾಪಿಸಿದರು.

2019ರ ಲೋಕಸಭಾ ಚುನಾವಣೆಯಲ್ಲಿ ಮಹಾಘಟಬಂಧನದ ಭಾಗವಾಗಿ ಮೂರು ಸ್ಥಾನಗಳಲ್ಲಿ ಸ್ಪರ್ಧಿಸಿ ಸೋತ ಸಹಾನಿ, 2020ರ ವಿಧಾನಸಭಾ ಚುನಾವಣೆಗೆ ಮುನ್ನ ಎನ್‌ಡಿಎ ಸೇರಿದರು. ಅವರಿಗೆ 11 ಸ್ಥಾನಗಳು ಲಭಿಸಿದ್ದು, ವಿಐಪಿ ನಾಲ್ಕು ಸ್ಥಾನಗಳನ್ನು ಗೆದ್ದಿತು. ಆದರೆ ನಂತರ ಪಕ್ಷದ ಶಾಸಕರು ಬಿಜೆಪಿ ಸೇರಿದರು. 2022ರಲ್ಲಿ ಸಹಾನಿ ಮತ್ತೆ ಮಹಾಘಟಬಂಧನಕ್ಕೆ ವಾಪಸ್ಸಾದರು.

2024ರ ಲೋಕಸಭಾ ಚುನಾವಣೆಯಲ್ಲಿ ವಿಐಪಿ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೂ ಜಯ ದೊರೆಯಲಿಲ್ಲ. ಪ್ರಸ್ತುತ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಸಹಾನಿ 30 ಸ್ಥಾನಗಳ ಬೇಡಿಕೆ ಇಟ್ಟಿದ್ದು, ಮಹಾಘಟಬಂಧನವು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ರಾಜಕೀಯ ಸಮತೋಲನ ಸಾಧಿಸಿದೆ.

ಸಹಾನಿ ತೇಜಸ್ವಿ ಯಾದವ್ ಮತ್ತು ಚಿರಾಗ್ ಪಾಸ್ವಾನ್ ಅವರನ್ನು ನಿತೀಶ್ ಕುಮಾರ್ ಅವರ ಸಾಮಾಜಿಕ ನ್ಯಾಯ ಪರಂಪರೆಯ ನಿಜವಾದ ಉತ್ತರಾಧಿಕಾರಿಗಳೆಂದು ಬಣ್ಣಿಸಿದ್ದಾರೆ. “ಎಲ್ಲಿ ನದಿ ಇದೆಯೋ, ಅಲ್ಲೆಲ್ಲಾ ಮಲ್ಲಾ ಇರುತ್ತಾನೆ” ಎಂಬ ತಮ್ಮ ಘೋಷವಾಕ್ಯದ ಮೂಲಕ ಅವರು ನಿಶಾದ್ ಸಮುದಾಯದ ಬಲವನ್ನು ಸ್ಪಷ್ಟಪಡಿಸಿದ್ದಾರೆ.

ಬಿಹಾರದ ರಾಜಕೀಯದಲ್ಲಿ ಇಬಿಸಿ ಮತದಾರರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮಹಾಘಟಬಂಧನವು ಸಹಾನಿಯವರ ಮುಖಾಂತರ ಸಾಮಾಜಿಕ ಸಮೀಕರಣ ಬಲಪಡಿಸಲು ಪ್ರಯತ್ನಿಸುತ್ತಿದೆ.

ಬಾಲಿವುಡ್ ಕನಸುಗಳಿಂದ ಬಿಹಾರದ ರಾಜಕೀಯ ವೇದಿಕೆಯವರೆಗೆ ಪಯಣಿಸಿದ ಮುಖೇಶ್ ಸಹಾನಿ, ಈಗ ಉಪಮುಖ್ಯಮಂತ್ರಿಯಾಗಿ ರಾಜ್ಯದ ಹೊಸ ರಾಜಕೀಯ ಅಧ್ಯಾಯ ಬರೆಯಲು ಸಜ್ಜಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News