1947ರಲ್ಲೇ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಬೇಕಿತ್ತು: ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಗಿರಿರಾಜ್ ಸಿಂಗ್ | PTI
ಹೊಸದಿಲ್ಲಿ: ಬುಧವಾರ ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಮತ್ತೊಮ್ಮೆ ಮುಸ್ಲಿಮರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು, "1947ರಲ್ಲೇ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಕಳಿಸಿದ್ದರೆ ದೇಶದಲ್ಲಿನ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು" ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಇದು ಈ ದೇಶದ ದುರಂತ. 1947ರಲ್ಲೇ ದೇಶವು ಧಾರ್ಮಿಕ ನೆಲೆಯಲ್ಲಿ ಇಬ್ಭಾಗವಾದಾಗ ನಮ್ಮ ಪೂರ್ವಜರು ಮುಸ್ಲಿಮರನ್ನೆಲ್ಲ ಪಾಕಿಸ್ತಾನಕ್ಕೆ ಕಳಿಸಿದ್ದರೆ, ಇಂದು ಯಾರೂ ಇಂತಹ ಪ್ರಶ್ನೆಗಳನ್ನೆತ್ತುತ್ತಿರಲಿಲ್ಲ" ಎಂದು ಕಿಡಿ ಕಾರಿದ್ದಾರೆ.
"ಮತ ಬ್ಯಾಂಕ್ ರಾಜಕಾರಣದಲ್ಲಿ ನಿರತರಾಗಿರುವವರು ಸನಾತನ ಧರ್ಮದ ಮೇಲೆ ಸಾಂಸ್ಕೃತಿಕ ದಾಳಿ ನಡೆಸುತ್ತಿದ್ದಾರೆ" ಎಂದೂ ಅವರು ಆರೋಪಿಸಿದ್ದಾರೆ.
ಗಿರಿರಾಜ್ ಸಿಂಗ್ ತಮ್ಮ ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಕುಖ್ಯಾತರಾಗಿದ್ದಾರೆ. ಗಿರಿರಾಜ್ ಸಿಂಗ್ ನವಾಡದಿಂದ ಒಂದು ಬಾರಿ ಹಾಗೂ ಬೇಗುಸರಾಯಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಗಿರಿರಾಜ್ ಸಿಂಗ್ ಮುಸ್ಲಿಮರ ಕುರಿತು ಆಡಿದ್ದಾರೆನ್ನಲಾದ ಕೆಲವು ಮಾತುಗಳನ್ನು ಆರೆಸ್ಸೆಸ್ ಮುಖವಾಣಿಯಾದ "ಪಾಂಚಜನ್ಯ"ವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.