ಭಾರತವು ತನ್ನ ಹಿತಾಸಕ್ತಿಗಳ ಬಗ್ಗೆ ಜಾಗರೂಕವಾಗಿರಬೇಕು: ಪ್ರಧಾನಿ
ನರೇಂದ್ರ ಮೋದಿ | PC : PTI
ವಾರಣಾಸಿ(ಉತ್ತರ ಪ್ರದೇಶ ),ಆ.2: ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ. ಹೀಗಾಗಿ ಅದು ತನ್ನ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಜಾಗರೂಕವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಇಲ್ಲಿ ಹೇಳಿದರು.
ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ‘ನಮ್ಮ ರೈತರು,ನಮ್ಮ ಸಣ್ಣ ಕೈಗಾರಿಕೆಗಳು,ನಮ್ಮ ಯುವಜನರಿಗೆ ಉದ್ಯೋಗ,ಅವರ ಹಿತಾಸಕ್ತಿಗಳು ನಮಗೆ ಅತ್ಯಂತ ಮುಖ್ಯವಾಗಿವೆ. ಈ ನಿಟ್ಟಿನಲ್ಲಿ ಸರಕಾರವು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ’ ಎಂದು ಹೇಳಿದರು.
ಜಾಗತಿಕ ಅಸ್ಥಿರತೆಯ ವಾತಾವರಣವನ್ನು ಬೆಟ್ಟು ಮಾಡಿದ ಅವರು,‘ನಮ್ಮ ಸರಕಾರವು ದೇಶದ ಹಿತದೃಷ್ಟಿಯಿಂದ ತನ್ನಿಂದ ಸಾಧ್ಯವಿರುವ ಪ್ರತಿಯೊಂದನ್ನೂ ಮಾಡುತ್ತಿದೆ. ದೇಶಕ್ಕೆ ಒಳಿತನ್ನು ಬಯಸುವವರು ಮತ್ತು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ನೋಡಲು ಬಯಸುವವರು, ಅದು ಯಾವುದೇ ರಾಜಕೀಯ ಪಕ್ಷವಾಗಿರಲಿ, ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಡಬೇಕು ಮತ್ತು ಸ್ವದೇಶಿ ಉತ್ಪನ್ನಗಳಿಗಾಗಿ ಸಂಕಲ್ಪವನ್ನು ರೂಪಿಸಬೇಕು. ನಾವು ಭಾರತೀಯರು ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸುತ್ತೇವೆ. ನಾವು ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸಬೇಕು’ ಎಂದರು.
ಟ್ರಂಪ್ ಭಾರತದಿಂದ ಆಮದು ಮಾಡಿಕೊಳ್ಳುವ ಬಹುತೇಕ ಎಲ್ಲ ಸರಕುಗಳ ಮೇಲೆ ಶೇ.25ರಷ್ಟು ಸುಂಕ ಹೆಚ್ಚಳ ಮತ್ತು ವ್ಯಾಪಾರ ದಂಡಗಳನ್ನು ಹೇರಿದ ಬಳಿಕ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ರಶ್ಯದೊಂದಿಗೆ ಭಾರತದ ಸಂಬಂಧದ ಕುರಿತು ಪ್ರತಿಕ್ರಿಯಿಸುತ್ತ ದೇಶವನ್ನು ‘ಸತ್ತ ಆರ್ಥಿಕತೆ’ ಎಂದು ಬಣ್ಣಿಸಿದ್ದು ಭಾರೀ ಚರ್ಚೆಗಳನ್ನು ಹುಟ್ಟುಹಾಕಿರುವ ನಡುವೆಯೇ ಮೋದಿಯವರ ಈ ಹೇಳಿಕೆಗಳು ಹೊರಬಿದ್ದಿವೆ.