×
Ad

ರಾಷ್ಟ್ರಗೀತೆಗೆ ಅವಮಾನ ಆರೋಪ: Tamil Nadu ರಾಜ್ಯಪಾಲ ಆರ್.ಎನ್. ರವಿ ವಿಧಾನಸಭೆಯಿಂದ ಸಭಾತ್ಯಾಗ

Update: 2026-01-20 12:47 IST

Photo credit: PTI

ಚೆನ್ನೈ: ರಾಷ್ಟ್ರಗೀತೆಗೆ ಅವಮಾನವಾಗಿದೆ ಎಂದು ಆರೋಪಿಸಿ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದದೇ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮಂಗಳವಾರ ರಾಜ್ಯ ವಿಧಾನಸಭೆ ಅಧಿವೇಶನದಿಂದ ಹೊರನಡೆದರು.

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಸಿದ್ಧಪಡಿಸಿದ್ದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿರುತ್ತಿರುವುದು ಇದು ಮೂರನೇ ಬಾರಿ.

ವಿಧಾನಸಭೆ ಅಧಿವೇಶನವು ರಾಷ್ಟ್ರಗೀತೆಯ ಬದಲಿಗೆ ತಮಿಳು ಗೀತೆಯೊಂದಿಗೆ ಆರಂಭಗೊಂಡಿರುವುದು ಸಂವಿಧಾನಾತ್ಮಕ ಕರ್ತವ್ಯದ ಉಲ್ಲಂಘನೆ ಎಂದು ರಾಜ್ಯಪಾಲರ ಕಚೇರಿ ಆರೋಪಿಸಿದೆ. ಇದರಿಂದ ರಾಷ್ಟ್ರಗೀತೆಗೆ ಮತ್ತೊಮ್ಮೆ ಅವಮಾನವಾಗಿದೆ ಎಂದು ಲೋಕಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಭಾತ್ಯಾಗದ ಬಳಿಕ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಸರ್ಕಾರ ಸಿದ್ಧಪಡಿಸಿದ ಭಾಷಣವು ಆಧಾರರಹಿತ ಆರೋಪಗಳು, ದಾರಿತಪ್ಪಿಸುವ ಹೇಳಿಕೆಗಳು ಹಾಗೂ ಜನತೆಗೆ ಸಂಬಂಧಿಸಿದ ಹಲವು ಗಂಭೀರ ವಿಷಯಗಳ ನಿರ್ಲಕ್ಷ್ಯವನ್ನು ಒಳಗೊಂಡಿದೆ ಎಂದು ಆರೋಪಿಸಲಾಗಿದೆ.

ಡಿಎಂಕೆ ಸರ್ಕಾರ ತಮಿಳುನಾಡು 12 ಲಕ್ಷ ಕೋಟಿ ರೂ.ಗಿಂತ ಅಧಿಕ ಹೂಡಿಕೆಗಳನ್ನು ಆಕರ್ಷಿಸಿದೆ ಎಂಬ ಹೇಳಿಕೆಯನ್ನು ಪ್ರಶ್ನಿಸಿರುವ ಲೋಕಭವನ, ಅನೇಕ ಒಪ್ಪಂದಗಳು ಕೇವಲ ಕಾಗದದಲ್ಲೇ ಉಳಿದಿವೆ ಎಂದು ಹೇಳಿದೆ. ವಾಸ್ತವಿಕ ಹೂಡಿಕೆ ಸೀಮಿತವಾಗಿದ್ದು, ವಿದೇಶಿ ನೇರ ಹೂಡಿಕೆ ಆಕರ್ಷಿಸುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡು ನಾಲ್ಕನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳಾ ಸುರಕ್ಷತೆ ವಿಷಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿರುವ ರಾಜ್ಯಪಾಲರ ಕಚೇರಿ, ಪೊಕ್ಸೊ ಪ್ರಕರಣಗಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಹೇಳಿದೆ. ದಲಿತರ ಹಾಗೂ ದಲಿತ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲೂ ಹೆಚ್ಚಳವಾಗಿದೆ ಎಂದು ತಿಳಿಸಲಾಗಿದೆ.

ಶಿಕ್ಷಣ ಕ್ಷೇತ್ರದಲ್ಲಿಯೂ ಗುಣಮಟ್ಟದಲ್ಲಿ ನಿರಂತರ ಕುಸಿತ ಕಂಡುಬಂದಿದ್ದು, ವರ್ಷಗಳಿಂದ ಖಾಲಿ ಇರುವ ಬೋಧಕ ಹುದ್ದೆಗಳು ಹಾಗೂ ಅತಿಥಿ ಉಪನ್ಯಾಸಕರ ಮೇಲಿನ ಅವಲಂಬನೆ ಯುವಕರ ಭವಿಷ್ಯಕ್ಕೆ ಆತಂಕ ಉಂಟುಮಾಡುತ್ತಿದೆ ಎಂದು ಲೋಕಭವನ ಹೇಳಿಕೆಯಲ್ಲಿ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸ್ಟಾಲಿನ್, ರಾಜ್ಯಪಾಲರ ಸಭಾತ್ಯಾಗ ಕ್ರಮವನ್ನು ಖಂಡಿಸಿದರು. ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ರಾಜ್ಯಪಾಲರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಸೇರಿಸಲು ಯಾವುದೇ ಅವಕಾಶವಿಲ್ಲ ಎಂದು ಅವರು ಹೇಳಿದರು. ರಾಜ್ಯಪಾಲರು ಸಂಪ್ರದಾಯ ಮತ್ತು ಸಂವಿಧಾನಾತ್ಮಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ಟಾಲಿನ್ ಆರೋಪಿಸಿದರು.

ರಾಜ್ಯಪಾಲರು ಭಾಷಣವನ್ನು ನೀಡದ ಹಿನ್ನೆಲೆಯಲ್ಲಿ, ಅದರ ಇಂಗ್ಲಿಷ್ ಆವೃತ್ತಿಯನ್ನು ಓದಲಾಗಿದೆ ಎಂದು ಪರಿಗಣಿಸಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News