ಪ್ರತಿಕೂಲ ಹವಾಮಾನ | ಕಾಶ್ಮೀರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಸಾವನ್ನು ಸಮೀಪದಿಂದ ಕಂಡ ಟಿಎಂಸಿ ಸಂಸದರು!
Photo: NDTV
ಹೊಸದಿಲ್ಲಿ: ನಾವು ಸಾವಿನ ಸಮೀಪ ಹೋಗಿದ್ದೆವು. ನನ್ನ ಜೀವನ ಮುಗಿದುಹೋಯಿತು ಎಂದು ನಾನು ಭಾವಿಸಿದ್ದೆ. ಜನರು ಚೀರಾಡುತ್ತಿದ್ದರು, ಪ್ರಾರ್ಥಿಸುತ್ತಿದ್ದರು, ಭಯಭೀತರಾಗಿದ್ದರು; ಬುಧವಾರ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಪ್ರಕ್ಷುಬ್ಧತೆಗೆ ಸಿಲುಕಿದ್ದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಟಿಎಂಸಿಯ ಐವರು ಸಂಸದರ ನಿಯೋಗದಲ್ಲಿದ್ದ ಸಾಗರಿಕಾ ಘೋಷ್ ತನ್ನ ಅನುಭವವನ್ನು ಹೇಳಿಕೊಂಡಿದ್ದು ಹೀಗೆ. ಡೆರೆಕ್ ಒಬ್ರಿಯೆನ್, ನದೀಮುಲ್ ಹಕ್, ಮಾನಸ್ ಭುನಿಯಾ ಮತ್ತು ಮತ್ತು ಮಮತಾ ಠಾಕೂರ್ ನಿಯೋಗದ ಇತರ ಸದಸ್ಯರಾಗಿದ್ದರು.
‘ನಮ್ಮನ್ನು ಪಾರು ಮಾಡಿದ ಪೈಲಟ್ ಗೆ ಹ್ಯಾಟ್ಸ್ ಆಫ್, ನಾವು ಇಳಿದಾಗ ವಿಮಾನದ ಮೂತಿ ಸ್ಫೋಟಗೊಂಡಿದ್ದನ್ನು ನೋಡಿದೆವು’ ಎಂದು ಹೇಳಿದ ಘೋಷ್, ನಿಲ್ದಾಣದಲ್ಲಿ ಇಳಿದ ಬಳಿಕ ನಿಯೋಗವು ಪೈಲಟ್ ಗೆ ಧನ್ಯವಾದಗಳನ್ನು ಸಲ್ಲಿಸಿತು ಎಂದರು.
200 ಜನರನ್ನು ಹೊತ್ತಿದ್ದ ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿದಿತ್ತು.
ಪ್ರಕ್ಷುಬ್ಧತೆಗೆ ಸಿಲುಕಿದ್ದ ವಿಮಾನ ಅತ್ತಿತ್ತ ತೂಗಾಡುತ್ತಿದ್ದಾಗ ಭಯಭೀತರಾಗಿದ್ದ ಪ್ರಯಾಣಿಕರು ತಮ್ಮ ಪ್ರಾಣಕ್ಕಾಗಿ ಪ್ರಾರ್ಥಿಸುವುದನ್ನು ತೋರಿಸಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಟಿಎಂಸಿ ನಿಯೋಗವು ಮೇ.23ರವರೆಗೆ ಜಮ್ಮುಕಾಶ್ಮೀರದಲ್ಲಿ ಉಳಿಯಲಿದೆ.
ಗಡಿಯಾಚೆಯ ದಾಳಿಗಳಿಂದ ಪೀಡಿತರು ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳ ದುಃಖವನ್ನು ಟಿಎಂಸಿ ನಿಯೋಗವು ಹಂಚಿಕೊಳ್ಳಲಿದೆ ಎಂದು ಪಕ್ಷವು ತಿಳಿಸಿದೆ.
►ಇಂಡಿಗೋ ಹೇಳಿಕೆ
ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 2142 ಮಾರ್ಗಮಧ್ಯೆ ಹಠಾತ್ ಆಲಿಕಲ್ಲು ಮಳೆಗೆ ಸಿಲುಕಿತ್ತು. ವಿಮಾನದ ಮತ್ತು ಕ್ಯಾಬಿನ್ ಸಿಬ್ಬಂದಿಗಳು ಶಿಷ್ಟಾಚಾರವನ್ನು ಪಾಲಿಸಿದರು ಮತ್ತು ವಿಮಾನವು ಸುರಕ್ಷಿತವಾಗಿ ಶ್ರೀನಗರದಲ್ಲಿ ಇಳಿಯಿತು ಎಂದು ವಿಮಾನಯಾನ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.