ನೀಟ್-ಪಿಜಿ 2025 | ನ್ಯಾಯಸಮ್ಮತೆ ಮತ್ತು ಪಾರದರ್ಶಕತೆಗಾಗಿ ಒಂದೇ ಪಾಳಿಯಲ್ಲಿ ನಡೆಸಲು ಸುಪ್ರೀಂ ಕೋರ್ಟ್ ಆದೇಶ
ಸುಪ್ರೀಂ ಕೋರ್ಟ್ | PTI
ಹೊಸದಿಲ್ಲಿ: ಶುಕ್ರವಾರ ಮಹತ್ವದ ಆದೇಶವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಜೂ.15ರಂದು ನಿಗದಿಯಾಗಿರುವ ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸುವಂತೆ ನಿರ್ದೇಶನಗಳನ್ನು ಹೊರಡಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಅದು ಎತ್ತಿ ತೋರಿಸಿದೆ.
ಪರೀಕ್ಷೆಯನ್ನು ಎರಡು ಪಾಳಿಗಳಲ್ಲಿ ನಡೆಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು,ಎರಡು ಪಾಳಿಗಳಲ್ಲಿ ಪರೀಕ್ಷೆಯನ್ನು ನಡೆಸುವುದು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಅಸಂಗತತೆಗಳು ಮತ್ತು ಅಕ್ರಮಗಳಿಗೆ ಕಾರಣವಾಗಬಹುದು ಎಂದು ಹೇಳಿದೆ.
ಎರಡು ವಿಭಿನ್ನ ಪ್ರಶ್ನೆಪತ್ರಿಕೆಗಳಲ್ಲಿ ಒಂದೇ ಬಗೆಯ ಕಠಿಣತೆಯನ್ನು ಖಚಿತಪಡಿಸುವುದು ಅಸಾಧ್ಯಮತ್ತು ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎನ್ನುವುದನ್ನು ಗಮನಕ್ಕೆ ತೆಗೆದುಕೊಂಡ ನ್ಯಾ.ವಿಕ್ರಮನಾಥ ನೇತೃತ್ವದ ಪೀಠವು,ಯಾವುದೇ ಎರಡು ಪ್ರಶ್ನೆಪತ್ರಿಕೆಗಳು ಒಂದೇ ಮಟ್ಟದ ಕಠಿಣತೆ ಅಥವಾ ಸುಲಭತೆಯನ್ನು ಹೊಂದಿರುತ್ತವೆ ಎಂದು ಹೇಳಲು ಎಂದಿಗೂ ಸಾಧ್ಯವಿಲ್ಲ ಮತ್ತು ಈ ವ್ಯತ್ಯಾಸವು ಪರೀಕ್ಷಾ ಪ್ರಕ್ರಿಯೆಯ ಸಮಗ್ರತೆಯನ್ನೇ ದುರ್ಬಲಗೊಳಿಸುತ್ತದೆ ಎಂದು ಎತ್ತಿ ತೋರಿಸಿತು.
ಪರೀಕ್ಷೆಯನ್ನು ಒಂದೇ ಪಾಳಿಯಲ್ಲಿ ನಡೆಸಲು ಎಲ್ಲ ಅಗತ್ಯ ಲಾಜಿಸ್ಟಿಕ್ ಮತ್ತು ಆಡಳಿತಾತ್ಮಕ ವ್ಯವಸ್ಥೆಗಳನ್ನು ಮಾಡುವಂತೆ ನ್ಯಾಯಾಲಯವು ತನ್ನ ಆದೇಶದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಪರೀಕ್ಷಾ ಪ್ರಕ್ರಿಯೆಯುದ್ದಕ್ಕೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು ಎಂದು ಅದು ಒತ್ತಿ ಹೇಳಿದೆ.
ಎರಡು ಪಾಳಿಗಳಲ್ಲಿ ಪರೀಕ್ಷೆಗಳು ನಡೆದಾಗ ಪ್ರಶ್ನೆಪತ್ರಿಕೆಗಳಲ್ಲಿಯ ಕಠಿಣತೆಗಳ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಕಳವಳಗಳನ್ನು ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಈ ತೀರ್ಪು ನೆಮ್ಮದಿಯನ್ನು ನೀಡುವ ನಿರೀಕ್ಷೆಯಿದೆ.
ನ್ಯಾಯಮೂರ್ತಿಗಳಾದ ಎನ್.ವಿ.ಅಂಜಾರಿಯಾ ಮತ್ತು ಸಂಜಯ ಕುಮಾರ ಅವರನ್ನೂ ಒಳಗೊಂಡಿದ್ದ ಪೀಠವು,ಎರಡು ಪ್ರತ್ಯೇಕ ಅವಧಿಗಳಲ್ಲಿ ಪರೀಕ್ಷೆಯನ್ನು ನಡೆಸುವುದು ‘ಅನಿಯಂತ್ರತೆ’ಗೆ ಕಾರಣವಾಗುತ್ತದೆ ಎಂದೂ ಬೆಟ್ಟು ಮಾಡಿತು.