×
Ad

ಬಡ, ಮುಸ್ಲಿಂ, ಆದಿವಾಸಿ ಮತ್ತು ದಲಿತರ ವಿರುದ್ಧ ಹೊಸ ಅಪರಾಧ ಕಾನೂನುಗಳ ಪ್ರಯೋಗ: ಉವೈಸಿ ಆತಂಕ

Update: 2024-07-05 09:00 IST

Asaduddin Owaisi (PTI)

ಹೈದರಾಬಾದ್: ಜುಲೈ 1ರಿಂದ ಅಸ್ತಿತ್ವಕ್ಕೆ ಬಂದಿರುವ ಹೊಸ ಅಪರಾಧ ಕಾನೂನುಗಳನ್ನು ಬಡವರು, ದುರ್ಬಲ ವರ್ಗದವರು, ಮುಸ್ಲಿಮರು, ಆದಿವಾಸಿಗಳು ಮತ್ತು ದಲಿತರ ವಿರುದ್ಧ ಇದೀಗ ಪ್ರಯೋಗಿಸಲಾಗುತ್ತಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸದುದ್ದೀನ್ ಉವೈಸಿ ಗುರುವಾರ ಆತಂಕ ವ್ಯಕ್ತಪಡಿಸಿದ್ದಾರೆ.

ವಿಚಾರಸಂಕಿರಣವೊಂದರಲ್ಲಿ ಮಾತನಾಡಿದ ಅವರು, "ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ) ಮುಂತಾದ ಹೊಸ ಅಪರಾಧ ಕಾನೂನುಗಳು ಜನಸಾಮಾನ್ಯರ ಹಕ್ಕುಗಳನ್ನು ಕುಗ್ಗಿಸುವ ಜತೆಗೆ ಪೊಲೀಸರಿಗೆ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಅಧಿಕಾರವನ್ನು ನೀಡಲಿವೆ" ಎಂದು ಆಪಾದಿಸಿದರು.

"ಈ ಹೊಸ ಅಪರಾಧ ಕಾನೂನುಗಳನ್ನು ಈ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬಡವರು, ದುರ್ಬಲ ವರ್ಗದವರು, ಮುಸ್ಲಿಮರು, ಆದಿವಾಸಿಗಳು ಮತ್ತು ದಲಿತರ ವಿರುದ್ಧ ಬಳಸಲಾಗುತ್ತದೆ" ಎಂದು ಪ್ರತಿಪಾದಿಸಿದರು.

ಪೊಲೀಸರು ಯಾವುದೇ ಪ್ರಮಾದ ಎಸಗಿದರೆ ಅವರ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಹೊಸ ಕಾನೂನಿನಲ್ಲಿ ಯಾವುದೇ ಉಲ್ಲೇಖ ಇಲ್ಲ ಎಂದು ಹೇಳಿದರು.

ಹೊಸ ಕಾನೂನುಗಳು ಯುಎಪಿಎ ಕಾಯ್ದೆಗಿಂತಲೂ ಅಪಾಯಕಾರಿ ಎಂದು ಬಣ್ಣಿಸಿದ ಅವರು, ಹೀಗಾದಲ್ಲಿ ಈ ಕಾನೂನುಗಳನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಜನ ಊಹಿಸಿಕೊಳ್ಳಬಹುದು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News