×
Ad

ಕೇಜ್ರಿವಾಲ್ ಆಪ್ತ ಸಹಾಯಕನ ನಿವಾಸದಲ್ಲಿ ಈ.ಡಿ. ಶೋಧ ನಡೆಸದೇ ಲಿವಿಂಗ್ ರೂಮ್ ನಲ್ಲಿ ಕುಳಿತುಕೊಂಡಿದ್ದರು: ದಿಲ್ಲಿ ಸಚಿವೆ ಅತಿಶಿ ಆರೋಪ

Update: 2024-02-07 22:27 IST

ಅತಿಶಿ | Photo: PTI

ಹೊಸದಿಲ್ಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರ ನಿವಾಸದ ಮೇಲೆ ಮಂಗಳವಾರ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಯಾವುದೇ ಕೊಠಡಿಯಲ್ಲಿ ಶೋಧ ನಡೆಸಿಲ್ಲ ಅಥವಾ ಸಾಕ್ಷ್ಯಗಳಿಗಾಗಿ ಹುಡುಕಾಡಿಲ್ಲ. ಬದಲಾಗಿ ಲಿವಿಂಗ್ ರೂಮ್ ನಲ್ಲಿ ಕುಳಿತುಕೊಂಡಿದ್ದರು ಎಂದು ದಿಲ್ಲಿ ಸಚಿವೆ ಅತಿಶಿ ಬುಧವಾರ ಆರೋಪಿಸಿದ್ದಾರೆ.

ತಾವು ಯಾವ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸುತ್ತಿದ್ದೇವೆ ಎಂಬ ಕುರಿತು ಕೂಡ ಅಧಿಕಾರಿಗಳು ತಿಳಿಸಲಿಲ್ಲ ಎಂದು ಅತಿಶಿ ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಭವ್ ಕುಮಾರ್ ಅವರ ನಿವಾಸದಿಂದ ಕೇವಲ ಎರಡು ಜಿಮೇಲ್ ಖಾತೆಯ ಡೌನ್ಲೋಡ್ಗಳನ್ನು ಹಾಗೂ ಕುಟುಂಬದ ಮೂರು ಫೋನ್ಗಳನ್ನು ವಶಕ್ಕೆ ತೆಗೆದುಕೊಂಡಿರುವುದು ‘ಪಂಚಮ’ ದಾಖಲೆಗಳು ಪ್ರದರ್ಶಿಸಿವೆ ಎಂದು ಅತಿಶಿ ಪ್ರತಿಪಾದಿಸಿದ್ದಾರೆ.

ಕೇಜ್ರಿವಾಲ್ ಅವರಿಗೆ ಅವಮಾನ ಉಂಟು ಮಾಡಲು ಜಾರಿ ನಿರ್ದೇಶನಾಲಯ ಈ ದಾಳಿಗಳನ್ನು ನಡೆಸಿದೆ. ಯಾಕೆಂದರೆ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗವಾಗಿ ಸವಾಲು ಹಾಕುವ ಏಕೈಕ ವ್ಯಕ್ತಿ ಎಂದರೆ ಕೇಜ್ರಿವಾಲ್ ಎಂದು ಅವರು ಹೇಳಿದರು.

‘‘ಬಿಜೆಪಿ ಹಾಗೂ ಮೋದಿ ಅರವಿಂದ ಕೇಜ್ರಿವಾಲ್ ಅವರನ್ನು ನಾಶಮಾಡಲು ಬಯಸಿದೆ. ಈಗ ಯಾವುದೇ ಪ್ರಕರಣ ಅಥವಾ ಇಸಿಐಆರ್ ಇಲ್ಲದೆ ದಾಳಿ ಮಾಡುವ ಮೂಲಕ ಇದನ್ನು ಸ್ಪಷ್ಟಪಡಿಸಿದೆ. ಇದು ಅತ್ಯುಚ್ಛ ತನಿಖಾ ಸಂಸ್ಥೆಯೇ? ಇಂದು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಮುಗಿಸಲು ಮಾತ್ರ ಜಾರಿ ನಿರ್ದೇಶನಾಲಯವನ್ನು ಬಳಸಲಾಗುತ್ತಿದೆ. ಈ ಪಟ್ಟಿಯಲ್ಲಿ ಕೇಜ್ರಿವಾಲ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ’’ ಎಂದು ಅತಿಶಿ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News