ಕೆನಡಾ ಪ್ರಧಾನಿ ಹುದ್ದೆಗೆ ರೇಸ್ ನಲ್ಲಿ ಭಾರತ ಮೂಲದ ಸಂಸದ ಚಂದ್ರ ಆರ್ಯ ಅಧಿಕೃತ ಎಂಟ್ರಿ
ಚಂದ್ರ ಆರ್ಯ | PC : NDTV
ಹೊಸದಿಲ್ಲಿ: ಕೆನಡಾದ ಸಂಸತ್ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಸುದ್ದಿಯಾಗಿದ್ದ ಭಾರತ ಮೂಲದ ನೇಪಿಯನ್ ಸಂಸದ ಚಂದ್ರ ಆರ್ಯ ಅವರು ದೇಶದ ಪ್ರಧಾನಿ ಹುದ್ದೆಗಾಗಿ ತನ್ನ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಕರ್ನಾಟಕದ ತುಮಕೂರು ಜಿಲ್ಲೆಯವರಾದ ಆರ್ಯ ಕೆನಡಾಕ್ಕೆ ತೆರಳುವ ಮುನ್ನ ಧಾರವಾಡದಲ್ಲಿ ಎಂಬಿಎ ಮಾಡಿದ್ದರು. ಕೆನಡಾ ಪ್ರಧಾನಿ ಹುದ್ದೆಗಾಗಿ ತಾನು ಸ್ಪರ್ಧಿಸುವುದಾಗಿ ಅವರು ಈ ವಾರದ ಆರಂಭದಲ್ಲಿ ಪ್ರಕಟಿಸಿದ್ದರು.
ಜಸ್ಟಿನ್ ಟ್ರುಡೊ ಅವರು ಇತ್ತೀಚಿಗೆ ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದು, ನೂತನ ನಾಯಕನ ಆಯ್ಕೆಯಾಗುವವರೆಗೆ ಹುದ್ದೆಯಲ್ಲಿ ಮಂದುವರಿಯಲಿದ್ದಾರೆ.
ಭಾರತದ ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸಿದ್ದಕ್ಕಾಗಿ ಮತ್ತು ಕೆನಡಾದಲ್ಲಿಯ ಹಿಂದು ದೇವಸ್ಥಾನಗಳಲ್ಲಿ ವಿರೂಪಗೊಳಿಸಿದ್ದಕ್ಕಾಗಿ ಖಾಲಿಸ್ತಾನಿ ಬೆಂಬಲಿಗರನ್ನು ಖಂಡಿಸುತ್ತಲೇ ಬಂದಿರುವ ಆರ್ಯ, ಅಗತ್ಯ ದಿಟ್ಟ ರಾಜಕೀಯ ನಿರ್ಧಾರಗಳೊಂದಿಗೆ ದೇಶವನ್ನು ‘ಸಾರ್ವಭೌಮ ಗಣರಾಜ್ಯ’ವನ್ನಾಗಿ ಮಾಡುವ ಭರವಸೆಯೊಂದಿಗೆ ಲಿಬರಲ್ ಪಾರ್ಟಿಯ ನಾಯಕತ್ವಕ್ಕೆ ಸ್ಪರ್ಧಿಸುವುದಾಗಿ ಈಗಾಗಲೇ ಪ್ರಕಟಿಸಿದ್ದಾರೆ.
ದೇಶವು ‘ಪರಿಪೂರ್ಣ ಚಂಡಮಾರುತ’ವನ್ನು ಎದುರಿಸುತ್ತಿದೆ ಎಂದು ಒಪ್ಪಿಕೊಂಡ ಆರ್ಯ, ಅನೇಕ ಕೆನೆಡಿಯನ್ನರು, ವಿಶೇಷವಾಗಿ ಯುವಪೀಳಿಗೆ ಗಮನಾರ್ಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದುಡಿಯುವ ವರ್ಗವು ಇಂದು ಹೆಣಗಾಡುತ್ತಿದೆ ಮತ್ತು ಹಲವಾರು ದುಡಿಯುವ ಕುಟುಂಬಗಳು ಬಡತನದಲ್ಲಿಯೇ ನಿವೃತ್ತಿಗೊಳ್ಳುತ್ತಿವೆ ಎಂದರು.
ಆರ್ಯ ಕಳೆದ ವರ್ಷದ ಆಗಸ್ಟ್ನಲ್ಲಿ ದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.
ಭಾರತವು ಕೆನಡಾದ ರಫ್ತುಗಳು ಮತ್ತು ಹೂಡಿಕೆಗಳಿಗೆ ಮಹತ್ವದ ಮತ್ತು ಬೆಳೆಯುತ್ತಿರುವ ಮಾರುಕಟ್ಟೆಯಾಗಿದೆ ಮತ್ತು ಅದು ದೇಶಧ ಪ್ರಮುಖ ಪ್ರತಿಭಾ ಅಗತ್ಯಗಳನ್ನು ಪೂರೈಸುವ ಮುಖ್ಯ ಮೂಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರ್ಯ ಭಾವಿಸಿದ್ದಾರೆ.
‘ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆದರದ ನಾಯಕತ್ವ ಕೆನಡಾಕ್ಕೆ ಬೇಕಿದೆ. ನಮ್ಮ ಆರ್ಥಿಕತೆಯನ್ನು ಪುನರ್ನಿರ್ಮಾಣ ಮಾಡುವ, ಭರವಸೆಯನ್ನು ಮರುಸ್ಥಾಪಿಸುವ, ಎಲ್ಲ ಕೆನೆಡಿಯನ್ನರಿಗೆ ಸಮಾನ ಅವಕಾಶಗಳನ್ನು ಸೃಷ್ಟಿಸುವ ಹಾಗೂ ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳಿಗೆ ಸಮೃದ್ಧಿಯನ್ನು ಖಚಿತಪಡಿಸುವ ನಿರ್ಧಾರಗಳು ಈಗ ಐಚ್ಛಿಕವಾಗಿ ಉಳಿದಿಲ್ಲ, ದಿಟ್ಟ ನಿರ್ಧಾರಗಳು ಈಗಿನ ಅಗತ್ಯಗಳಾಗಿವೆ. ವಿವೇಕ ಮತ್ತು ವಾಸ್ತವಿಕತೆಯನ್ನು ನನ್ನ ಮಾಗದರ್ಶಿ ಸೂತ್ರಗಳನ್ನಾಗಿಸಿಕೊಂಡು ಈ ಹೊಣೆಯನ್ನು ವಹಿಸಿಕೊಳ್ಳಲು ಮತ್ತು ಕೆನಡಾದ ಮುಂದಿನ ಪ್ರಧಾನಿಯಾಗಿ ಅದನ್ನು ಮುನ್ನಡೆಸಲು ಮುಂದಾಗುತ್ತಿದ್ದೇನೆ ’ ಎಂದು ಆರ್ಯ ಹೇಳಿದರು.