×
Ad

ಕೇಂದ್ರ,ಉತ್ತರ ಪ್ರದೇಶ ಸರಕಾರದ ವಿರುದ್ಧ ಸ್ಟಾಲಿನ್ ವಾಗ್ದಾಳಿ

Update: 2025-02-09 21:06 IST

                                                         ಎಮ್.ಕೆ. ಸ್ಟಾಲಿನ್| PC : PTI

ಚೆನ್ನೈ : ಅಮೆರಿಕವು ಭಾರತೀಯ ಅಕ್ರಮ ವಲಸಿಗರನ್ನು ಕೈಗಳಿಗೆ ಕೋಳ ಮತ್ತು ಕಾಲುಗಳಿಗೆ ಸಂಕಲೆ ತೊಡಿಸಿ ಗಡೀಪಾರು ಮಾಡಿರುವ ಘಟನೆಗೆ ಸಂಬಂಧಿಸಿ ತಮಿಳುನಾಡು ಮುಖ್ಯಮಂತ್ರಿ ಎಮ್.ಕೆ. ಸ್ಟಾಲಿನ್ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದೇ ವೇಳೆ, ಮಹಾಕುಂಭ ಮೇಳದಲ್ಲಿ ಭಕ್ತರ ಸಾವಿಗೆ ಕಾರಣವಾದ ಕಾಲ್ತುಳಿತ ಘಟನೆಗೆ ಸಂಬಂಧಿಸಿ ಉತ್ತರಪ್ರದೇಶವನ್ನು ಟೀಕಿಸಿದ್ದಾರೆ.

ತಮಿಳುನಾಡಿಗೆ ‘‘ದ್ರೋಹಗೈದಿರುವುದಕ್ಕಾಗಿ’’ ಕೇಂದ್ರ ಸರಕಾರವನ್ನು ಖಂಡಿಸಲು ಇಲ್ಲಿ ಏರ್ಪಡಿಸಲಾದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ತಮಿಳುನಾಡಿಗೆ ಸಲ್ಲಬೇಕಾಗಿರುವ ಪ್ರಮಾಣದ ನಿಧಿಯನ್ನು ಕೇಂದ್ರ ಸರಕಾರವು ಬಿಡುಗಡೆಗೊಳಿಸುತ್ತಿಲ್ಲ ಎಂದು ಆರೋಪಿಸಿದರು. ಪ್ರಾಕೃತಿಕ ವಿಕೋಪಗಳು ಸಂಭವಿಸಿದರೂ ಅದು ರಾಜ್ಯ ಸರಕಾರಕ್ಕೆ ನೆರವು ನೀಡುತ್ತಿಲ್ಲ ಎಂದರು. ‘‘ಕೇಂದ್ರ ಸರಕಾರವು ತನ್ನನ್ನು ತಾನು ತಿದ್ದಿಕೊಳ್ಳಬೇಕು, ಇಲ್ಲದಿದ್ದರೆ ಅದನ್ನು ತಿದ್ದಲಾಗುವುದು. ಕೇಂದ್ರ ಸರಕಾರವು ತನ್ನ ಮನೋಭಾವವನ್ನು ಬದಲಾಯಿಸದಿದ್ದರೆ, ಅದು ಪ್ರತಿ ದಿನ ಜನರ ನ್ಯಾಯಾಲಯದಲ್ಲಿ ಗೌರವವನ್ನು ಕಳೆದುಕೊಳ್ಳುತ್ತದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಮಹಾಕುಂಭಮೇಳದಲ್ಲಿ, ಸರಿಯಾದ ಸುರಕ್ಷತಾ ವ್ಯವಸ್ಥೆಗಳನ್ನು ಮಾಡದ ಹಿನ್ನೆಲೆಯಲ್ಲಿ 48 ಮಂದಿ ಪ್ರಾಣ ಕಳೆದುಕೊಂಡರು ಎಂದು ಡಿಎಮ್‌ಕೆ ಮುಖ್ಯಸ್ಥರೂ ಆಗಿರುವ ಸ್ಟಾಲಿನ್ ಆರೋಪಿಸಿದರು. ಆದರೆ, ಕೇವಲ 30 ಮಂದಿ ಮೃತಪಟ್ಟಿದ್ದಾರೆ ಎಂದು ಉತ್ತರಪ್ರದೇಶ ಸರಕಾರ ಹೇಳಿದೆ.

‘‘ಮೃತರ ಸಂಖ್ಯೆ 48 ಎಂದು ಮಾಧ್ಯಮಗಳು ಹೇಳುತ್ತಿವೆ. ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ರಾಜ್ಯದ ನಾಯಕರು ಹೇಳುತ್ತಿದ್ದಾರೆ. ಜೆಸಿಬಿ ಯಂತ್ರಗಳನ್ನು ಬಳಸಿ ಮೃತದೇಹಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ. ಈ ಘಟನೆಯ ಬಗ್ಗೆ ಚರ್ಚೆಗೆ ಸಂಸತ್‌ನಲ್ಲಿ ಅವಕಾಶ ನೀಡಲಾಗಿಲ್ಲ. ರಾಜ್ಯ ಸರಕಾರವು ಕುಂಭ ಹಬ್ಬಕ್ಕೆ ಜನರನ್ನು ಆಹ್ವಾನಿಸಿದೆ. ಅವರಿಗೆ ರಕ್ಷಣೆ ನೀಡುವುದು ರಾಜ್ಯ ಸರಕಾರದ ಕರ್ತವ್ಯವಲ್ಲವೇ’’ ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News