×
Ad

ಹೋಳಿ ಬಣ್ಣಗಳನ್ನು ಬಯಸದ ಮುಸ್ಲಿಮರು ಮನೆಯಲ್ಲಿಯೇ ಇರಬೇಕು: ವಿವಾದ ಸೃಷ್ಟಿಸಿದ ಉತ್ತರ ಪ್ರದೇಶ ಪೋಲಿಸ್ ಅಧಿಕಾರಿ ಹೇಳಿಕೆ

Update: 2025-03-07 20:53 IST

PC : NDTV 

ಸಂಭಲ್(ಉ.ಪ್ರ): ಹೋಳಿ ಹಬ್ಬ ವರ್ಷಕ್ಕೆ ಒಮ್ಮೆ ಮಾತ್ರ ಬರುತ್ತದೆ,ಹೀಗಾಗಿ ಮುಸ್ಲಿಮರಿಗೆ ಹೋಳಿ ಬಣ್ಣಗಳು ಇಷ್ಟವಾಗದಿದ್ದರೆ ಅವರು ತಮ್ಮ ಮನೆಗಳಲ್ಲಿಯೇ ಇರಬೇಕು ಎಂದು ಸಂಭಲ್‌ನ ಪೋಲಿಸ್ ಅಧಿಕಾರಿಯೋರ್ವರು ಹೇಳಿದ್ದು, ಇದನ್ನು ಟೀಕಿಸಿರುವ ಪ್ರತಿಪಕ್ಷ ನಾಯಕರು, ಪೋಲಿಸ್ ಅಧಿಕಾರಿಗಳು ಆಡಳಿತಾರೂಢ ಬಿಜೆಪಿಯ ಏಜೆಂಟ್‌ಗಳಂತೆ ವರ್ತಿಸಬಾರದು ಎಂದು ಕುಟುಕಿದ್ದಾರೆ.

ಈ ವರ್ಷ ಪವಿತ್ರ ರಮಝಾನ್ ತಿಂಗಳಲ್ಲಿ ಶುಕ್ರವಾರದ ಸಾಮೂಹಿಕ ನಮಾಝ್ ಸಂದರ್ಭದಲ್ಲಿಯೇ ನಡೆಯಲಿರುವ ಹೋಳಿ ಹಬ್ಬಕ್ಕೆ ಮುನ್ನ ನಡೆದ ಶಾಂತಿಸಭೆಯ ಬಳಿಕ ಸಂಭಲ್ ಸರ್ಕಲ್ ಆಫೀಸರ್ ಅನುಜ ಕುಮಾರ ಚೌಧರಿಯವರ ಈ ಹೇಳಿಕೆ ಹೊರಬಿದ್ದಿದೆ. ಹೋಳಿ ಹಬ್ಬವನ್ನು ಮಾ.14ರಂದು ಆಚರಿಸಲಾಗುವುದು.

ನೀವು ಬಣ್ಣಗಳನ್ನು ಇಷ್ಟಪಡುವುದಿಲ್ಲವಾದರೆ ಹೋಳಿ ಸಂಭ್ರಮಾಚರಣೆಯ ಸ್ಥಳಗಳತ್ತ ಹೋಗಬೇಡಿ ಎಂದು ಮುಸ್ಲಿಮರನ್ನು ಆಗ್ರಹಿಸಿದ ಚೌಧರಿ,‌ ವರ್ಷವೊಂದರಲ್ಲಿ 52 ಶುಕ್ರವಾರದ ಪ್ರಾರ್ಥನೆಗಳಿರುತ್ತವೆ, ಆದರೆ ಹೋಳಿ ಹಬ್ಬ ವರ್ಷಕ್ಕೊಮ್ಮೆ ಮಾತ್ರ ಬರುತ್ತದೆ. ಮುಸ್ಲಿಮರು ಈದ್‌ಗಾಗಿ ಇಡೀ ವರ್ಷ ಕಾಯುವಂತೆ ಹಿಂದೂಗಳೂ ಹೋಳಿಗಾಗಿ ಕಾಯುತ್ತಾರೆ. ತಮ್ಮ ಮೇಲೆ ಹೋಳಿ ಬಣ್ಣಗಳನ್ನು ಎರಚಬಾರದು ಎಂದು ಮುಸ್ಲಿಮರು ಬಯಸಿದರೆ ಅವರು ತಮ್ಮ ಮನೆಗಳಲ್ಲಿಯೇ ಇರಬೇಕು. ಮನೆಯಿಂದ ಹೊರಹೋಗಲು ಬಯಸಿದರೆ ತಮ್ಮ ಮೇಲೆ ಬಣ್ಣ ಬಿದ್ದರೆ ಅದನ್ನು ಆಕ್ಷೇಪಿಸದಷ್ಟು ದೊಡ್ಡ ಮನಸ್ಸನ್ನು ಅವರು ಹೊಂದಿರಬೇಕು ಎಂದು ಹೇಳಿದರು.

ಹೋಳಿ ಪ್ರೀತಿಯ ಹಬ್ಬ ಮತ್ತು ಅದು ಶಾಂತಿಯುತವಾಗಿ ನಡೆಯಬೇಕು ಎಂದು ನಾವು ಬಯಸಿದ್ದೇವೆ ಎಂದ ಚೌಧರಿ,ವಾತಾವರಣವನ್ನು ಕೆಡಿಸುವವರನ್ನು ನಾವು ಬಿಡುವುದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ವಕ್ತಾರ ಶರ್ವೇಂದ್ರ ಬಿಕ್ರಮ ಸಿಂಗ್ ಅವರು,ಅಧಿಕಾರಿಗಳು ಬಿಜೆಪಿಯ ಏಜೆಂಟ್‌ಗಳಂತೆ ವರ್ತಿಸಬಾರದು. ಮುಖ್ಯಮಂತ್ರಿಗಳು ಹೇಳುವುದನ್ನು ಅನುಸರಿಸುವ ಮೂಲಕ ಅಧಿಕಾರಿಗಳು ಅವರನ್ನು ಓಲೈಸುತ್ತಾರೆ. ಇಂತಹ ಹೇಳಿಕೆಗಳನ್ನು ನೀಡುವ ಮತ್ತು ಬಹಿರಂಗವಾಗಿ ತಮ್ಮ ಪಕ್ಷಪಾತವನ್ನು ಪ್ರದರ್ಶಿಸುವ ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ಅಧಿಕಾರಿಗಳು ಜಾತ್ಯತೀತರಾಗಿದ್ದರೆ ಮಾತ್ರ ಆಡಳಿತವು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ಹೇಳಿದ ಕಾಂಗ್ರೆಸ್ ನಾಯಕ ಮನೀಶ ಹಿಂದವಿ ಅವರು, ನಿರ್ದಿಷ್ಟ ಧರ್ಮದ ಜನರು ಬಣ್ಣಗಳೊಡನೆ ಆಡುವುದನ್ನು ಇಷ್ಟಪಡುವುದಿಲ್ಲವಾದರೆ ಭೀತಿ ಅಥವಾ ಅಭದ್ರತೆಯ ವಾತಾವರಣವಿರದಂತೆ ನೋಡಿಕೊಳ್ಳುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News