×
Ad

ಸ್ಪೇನ್: ʼಭಾರತದ ರಾಷ್ಟ್ರ ಭಾಷೆ ಯಾವುದುʼ ಎಂಬ ಪ್ರಶ್ನೆಗೆ ಡಿಎಂಕೆ ಸಂಸದೆ ಕನಿಮೋಳಿ ನೀಡಿದ ಉತ್ತರ ಹೀಗಿತ್ತು..

Update: 2025-06-03 15:23 IST

Photo credit: X/@IndiainSpain

ಮ್ಯಾಡ್ರಿಡ್ (ಸ್ಪೇನ್): 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಹಾಗೂ ಭಯೋತ್ಪಾದನೆಯ ಕುರಿತು ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿಕೊಡಲು ಭಾರತದಿಂದ ವಿದೇಶಗಳಿಗೆ ತೆರಳಿರುವ ನಿಯೋಗವೊಂದರ ನೇತೃತ್ವ ವಹಿಸಿರುವ ಡಿಎಂಕೆ ಸಂಸದೆ ಕನಿಮೋಳಿ ಅವರಿಗೆ ಸ್ಪೇನ್ ನಲ್ಲಿ ಕೇಳಲಾದ "ಭಾರತದ ರಾಷ್ಟ್ರ ಭಾಷೆ ಯಾವುದು?" ಎಂಬ ಪ್ರಶ್ನೆಗೆ ಅವರು "ವಿವಿಧತೆಯಲ್ಲಿ ಏಕತೆ" ಉತ್ತರಿಸಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

"ಭಾರತದ ರಾಷ್ಟ್ರೀಯ ಭಾಷೆ ವಿವಿಧತೆಯಲ್ಲಿನ ಏಕತೆ. ಈ ನಿಯೋಗವು ಜಗತ್ತಿಗೆ ನೀಡಿದ ಸಂದೇಶವೇ ಅದು. ಅದು ಇಂದಿನ ಅತ್ಯಂತ ಪ್ರಮುಖ ವಿಷಯ ಕೂಡಾ" ಎಂದು ಅವರು ಮ್ಯಾಡ್ರಿಡ್‌ನಲ್ಲಿ ನೆಲೆಸಿರುವ ಭಾರತೀಯ ವಲಸಿಗರ ಪ್ರಶ್ನೆಗೆ ಉತ್ತರಿಸಿದ್ದಾರೆ.

ಭಯೋತ್ಪಾದನೆಯ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, "ನಮ್ಮ ದೇಶದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ದುರದೃಷ್ಟವಶಾತ್, ಭಯೋತ್ಪಾದನೆಯಿಂದಾಗಿ ನಮ್ಮ ಗಮನ ಬೇರೆಡೆ ಹೋಗುತ್ತಿದೆ. ನಾವು ಭಯೋತ್ಪಾದನೆಯನ್ನು ಎದುರಿಸಬೇಕಿದ್ದು, ಯುದ್ಧ ಸಂಪೂರ್ಣ ಅನಗತ್ಯ" ಎಂದು ಒತ್ತಿ ಹೇಳಿದ್ದಾರೆ. ಇದೇ ವೇಳೆ, ಭಾರತ ಸುರಕ್ಷಿತ ಸ್ಥಳವಾಗಿದ್ದು, ಕಾಶ್ಮೀರವೂ ಸುರಕ್ಷಿತವಾಗಿದೆ ಎಂದು ಸರಕಾರ ಖಚಿತ ಪಡಿಸುತ್ತದೆ ಎಂದೂ ಅವರು ಹೇಳಿದ್ದಾರೆ.

"ಭಾರತೀಯರಾಗಿ ನಾವು ಭಾರತ ಸುರಕ್ಷಿತವಾಗಿದೆ ಎಂಬ ಸಂದೇಶ ಸಾರಬೇಕಿದೆ. ಪಾಕಿಸ್ತಾನ ಏನೇ ಪ್ರಯತ್ನ ಮಾಡಿದರೂ, ನಮ್ಮನ್ನು ಹಳಿ ತಪ್ಪಿಸಲು ಸಾಧ್ಯವಿಲ್ಲ. ಕಾಶ್ಮೀರ ಸುರಕ್ಷಿತ ಸ್ಥಳವಾಗಿ ಉಳಿಯುವುದನ್ನು ನಾವು ಖಾತರಿ ಪಡಿಸಿಕೊಳ್ಳುತ್ತೇವೆ" ಎಂದು ಅವರು ಘೋಷಿಸಿದ್ದಾರೆ.

ಐದು ರಾಷ್ಟ್ರಗಳ ಭೇಟಿಗೆ ತೆರಳಿರುವ ಕನಿಮೋಳಿ ನೇತೃತ್ವದ ನಿಯೋಗವು, ಕೊನೆಯ ಹಂತದ ಭೇಟಿಯ ಭಾಗವಾಗಿ ಸ್ಪೇನ್‌ಗೆ ಭೇಟಿ ನೀಡಿದ್ದು, ಈ ಭೇಟಿಯ ನಂತರ, ಸ್ವದೇಶಕ್ಕೆ ಹಿಂದಿರುಗಲಿದೆ. ಈ ನಿಯೋಗದಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕುಮಾರ್ ರೈ, ಬಿಜೆಪಿಯ ಬೃಜೇಶ್ ಚೌಟ, ಆಪ್‌ನ ಅಶೋಕ್ ಮಿತ್ತಲ್, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ ಹಾಗೂ ಮಾಜಿ ರಾಜತಾಂತ್ರಿಕ ಮಂಜೀವ್ ಸಿಂಗ್ ಪುರಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News