×
Ad

ಕೇರಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅಮಾನತು : ಭುಗಿಲೆದ್ದ ವಿವಾದ

Update: 2025-07-03 18:45 IST

PC : PTI 

ತಿರುವನಂತಪುರಂ : ಕೇರಳ ವಿಶ್ವವಿದ್ಯಾಲಯದ ಸೆನೆಟ್ ಹಾಲ್‌ನಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಭಾಗವಹಿಸಿದ್ದ ಖಾಸಗಿ ಕಾರ್ಯಕ್ರಮಕ್ಕೆ ನೋಟಿಸ್ ಜಾರಿಗೊಳಿಸಿ, ಅದನ್ನು ರದ್ದುಗೊಳಿಸಿದ ಆರೋಪದಲ್ಲಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಕೆ.ಎಸ್.ಅನಿಲ್ ಕುಮಾರ್ ಅವರನ್ನು ಅಮಾನತುಗೊಳಿಸಿ ಕೇರಳ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ ಆದೇಶ ಹೊರಡಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಿಡಿದ ಭಾರತ ಮಾತೆಯ ಭಾವಚಿತ್ರವನ್ನು ಪ್ರದರ್ಶಿಸಲಾಗಿತ್ತು.

ಜೂನ್ 25ರಂದು ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿಯೂ ಆಗಿರುವ

ರಾಜ್ಯಪಾಲರು ವೇದಿಕೆಯ ಮೇಲಿದ್ದಾಗ, ಶ್ರೀ ಪದ್ಮನಾಭ ಸೇವಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದ ಆರೋಪದ ಮೇಲೆ ರಿಜಿಸ್ಟ್ರಾರ್ ರನ್ನು ಅಮಾನತುಗೊಳಿಸಲಾಗಿದೆ.

ಆದರೆ, ಈ ಆರೋಪವನ್ನು ಅಲ್ಲಗಳೆದಿರುವ ರಿಜಿಸ್ಟ್ರಾರ್ ಕೆ.ಎಸ್.ಅನಿಲ್ ಕುಮಾರ್, ಕಾರ್ಯಕ್ರಮಕ್ಕೆ ರಾಜ್ಯಪಾಲರು ಆಗಮಿಸುವ ಮುನ್ನವೇ ನೋಟಿಸ್ ಜಾರಿಗೊಳಿಸಲಾಗಿತ್ತು ಹಾಗೂ ಅದನ್ನು ಸಾಬೀತು ಪಡಿಸಲು ನನ್ನ ಬಳಿ ಸಾಕ್ಷ್ಯಧಾರಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಹಾಗೂ ಉಪ ಕುಲಪತಿಗಳ ಕ್ರಮವನ್ನು ನಾನು ಕಾನೂನಾತ್ಮಕವಾಗಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ಉಪ ಕುಲಪತಿಗಳ ಕ್ರಮಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ರಾಜ್ಯ ಉನ್ನತ ಶಿಕ್ಷಣ ಸಚಿವೆ ಅರ್.ಬಿಂದು, “ಡಾ. ಕುನ್ನುಮ್ಮಲ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

ಅಸ್ತಿತ್ವದಲ್ಲಿರುವ ಕಾಯ್ದೆ ಹಾಗೂ ನಿಯಮಗಳ ಪ್ರಕಾರ, ಉಪ ಕುಲಪತಿಗಳಿಗೆ ರಿಜಿಸ್ಟ್ರಾರ್ ರನ್ನು ಅಮಾನತುಗೊಳಿಸುವ ಯಾವುದೇ ಅಧಿಕಾರವಿಲ್ಲ. ಈ ಅಧಿಕಾರ ಹೊಂದಿರುವುದು ರಿಜಿಸ್ಟ್ರಾರ್‌ರನ್ನು ನೇಮಕ ಮಾಡುವ ಸಿಂಡಿಕೇಟ್ ಗೆ ಮಾತ್ರ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News