×
Ad

ಈಗಾಗಲೇ ಕಾರ್ಯಾಂಗದ ವ್ಯಾಪ್ತಿಯನ್ನು ಅತಿಕ್ರಮಿಸಿದ ಆರೋಪ ನ್ಯಾಯಾಲಯ ಎದುರಿಸುತ್ತಿದೆ: ನ್ಯಾಯಾಂಗದ ಬಗ್ಗೆ ಟೀಕೆ ಬೆನ್ನಲ್ಲೇ ನಿಯೋಜಿತ ಸಿಜೆಐ ಬಿಆರ್ ಗವಾಯಿ ಪ್ರತಿಕ್ರಿಯೆ

Update: 2025-04-21 14:36 IST

ಜಸ್ಟಿಸ್ ಬಿ.ಆರ್. ಗವಾಯಿ (PTI)

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ಇತ್ತೀಚಿನ ಹಿಂಸಾಚಾರದ ಘಟನೆಗಳ ಬಗ್ಗೆ ವಕೀಲರೋರ್ವರು ಕೇಂದ್ರಕ್ಕೆ ನಿರ್ದೇಶನವನ್ನು ಕೋರಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಬಿಆರ್ ಗವಾಯಿ, ʼಕಾರ್ಯಾಂಗದ ವ್ಯಾಪ್ತಿಯನ್ನು ಅತಿಕ್ರಮಿಸುತ್ತಿದೆ ಎಂಬ ಆರೋಪವನ್ನು ನ್ಯಾಯಾಲಯ ಎದುರಿಸುತ್ತಿದೆʼ ಎಂದು ಹೇಳಿದರು

ಶಾಸಕಾಂಗ ಅಂಗೀಕರಿಸಿದ ಮಸೂದೆಗಳನ್ನು ಅಂಗೀಕರಿಸಲು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಗಡುವನ್ನು ನಿಗದಿಪಡಿಸಿದ ತೀರ್ಪಿನ ನಂತರ ಕೆಲವು ಬಿಜೆಪಿ ನಾಯಕರು ನ್ಯಾಯಾಲಯದ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಳ ಬೆನ್ನಲ್ಲೇ ಜಸ್ಟಿಸ್ ಬಿಆರ್ ಗವಾಯಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಕೀಲ ವಿಷ್ಣು ಶಂಕರ್ ಜೈನ್ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ವೇಳೆ ಬಂಗಾಳದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ಬಾಕಿ ಉಳಿದಿರುವ ಮನವಿಯನ್ನು ಪ್ರಸ್ತಾಪಿಸಿದ ವೇಳೆ ನ್ಯಾಯಾಲಯ ಈ ರೀತಿ ಪ್ರತಿಕ್ರಿಯೆ ನೀಡಿದೆ.

ಮುರ್ಷಿದಾಬಾದ್‌ನಲ್ಲಿ ಅರೆಸೇನಾ ಪಡೆಗಳನ್ನು ನಿಯೋಜನೆ ಮತ್ತು ಹಿಂಸಾಚಾರದ ತನಿಖೆಗಾಗಿ ಮೂವರು ನಿವೃತ್ತ ನ್ಯಾಯಾಧೀಶರ ಸಮಿತಿಯನ್ನು ರಚಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಇದನ್ನು ವಿಧಿಸಲು ನಾವು ರಾಷ್ಟ್ರಪತಿಗಳಿಗೆ ಆದೇಶ ನೀಡಬೇಕೆಂದು ನೀವು ಬಯಸುತ್ತೀರಾ? ಈಗಾಗಲೇ ನಾವು ಕಾರ್ಯಾಂಗದ ವ್ಯಾಪ್ತಿಯನ್ನು ಅತಿಕ್ರಮಣ ಮಾಡಿರುವ ಆರೋಪಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಮುಂದಿನ ತಿಂಗಳು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿರುವ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಈ ಹೇಳಿಕೆಯು, ನ್ಯಾಯಾಂಗದ ವಿರುದ್ಧ ಆಡಳಿತ ಪಕ್ಷದ ಕೆಲ ನಾಯಕರು ಮಾಡುತ್ತಿರುವ ಟೀಕೆಗಳನ್ನು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸೂಚಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News