×
Ad

"ಸೈಫ್ ಅಲಿ ಖಾನ್ ಮನೆಯಲ್ಲಿ ಸಿಸಿಟಿವಿ ಇರಲಿಲ್ಲ": ಅಚ್ಚರಿ ವ್ಯಕ್ತಪಡಿಸಿದ ಮುಂಬೈ ಪೊಲೀಸರು

Update: 2025-01-17 11:27 IST

Photo credit: PTI

ಮುಂಬೈ: ತಮ್ಮ ಪತ್ನಿ ಕರೀನಾ ಕಪೂರ್ ಖಾನ್ ಹಾಗೂ ಮಕ್ಕಳೊಂದಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಾಸಿಸುತ್ತಿದ್ದ ಬಾಂದ್ರಾ ನಿವಾಸದಲ್ಲಿ ಒಳಗಾಗಲಿ ಅಥವಾ ಹೊರಗಾಗಲಿ ಸಿಸಿಟಿವಿ ಅಳವಡಿಸದೆ ಇರುವುದರಿಂದ, ನಿವಾಸಕ್ಕೆ ನುಗ್ಗಿದ ಅಪರಿಚಿತ ದುಷ್ಕರ್ಮಿಯ ಚಲನವಲನವನ್ನು ಪತ್ತೆ ಹಚ್ಚುವುದು ನಿಜಕ್ಕೂ ಅಸಾಧ್ಯವಾಗಿ ಪರಿಣಮಿಸಿದೆ ಎಂದು ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹೇಳಿದ್ದಾರೆ.

ಗುರುವಾರ ಮುಂಜಾನೆ ಸೈಫ್ ಅಲಿ ಖಾನ್ ಮೇಲೆ ದಾಳಿ ನಡೆಸಿದ ನಂತರ, ಹಲ್ಲೆಕೋರನು ಪರಾರಿಯಾಗುವಾಗ ಆತನ ಚಿತ್ರವು ಸದ್ಗುರು ಶರಣ್ ಕಟ್ಟಡದಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಸಿಸಿಟಿವಿ ಕ್ಯಾಮೆರಾ ಇರದ ಡಕ್ಟ್ ಮೂಲಕ ನುಸುಳುಕೋರನು ಸೈಫ್ ಅಲಿ ಖಾನ್ ನಿವಾಸದ ಆವರಣವನ್ನು ಪ್ರವೇಶಿಸಿದ್ದಾನೆ ಎಂದು ಹೇಳಿರುವ ಪೊಲೀಸರು, ಅವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆಗಳು ಇಲ್ಲದೆ ಇರುವುದನ್ನು ಕಂಡು ಅಚ್ಚರಿಯಾಗಿದೆ ಎಂದೂ ಹೇಳಿದ್ದಾರೆ.

ಘಟನೆಯ ಸನ್ನಿವೇಶಗಳನ್ನು ತನಿಖೆ ನಡೆಸಲು ವಿಧಿವಿಜ್ಞಾನ ತಜ್ಞರು ಹಾಗೂ ಬೆರಳಚ್ಚು ತಜ್ಞರೊಂದಿಗೆ ಒಂದು ಪೊಲೀಸ್ ತಂಡ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ಭೇಟಿ ನೀಡಿತ್ತು.

“ಸಂದರ್ಶಕರ ಮೇಲೆ ನಿಗಾ ವಹಿಸಲು ಅಥವಾ ಯಾವುದಾದರೂ ತುರ್ತು ಸಂದರ್ಭದಲ್ಲಿ ಸ್ಪಂದಿಸಲು ಸೈಫ್ ಅಲಿ ಖಾನ್ ಅವರ ಫ್ಲ್ಯಾಟ್ ನಲ್ಲಿ ಅಂಗ ರಕ್ಷಕರನ್ನೂ ನಿಯೋಜಿಸಲಾಗಿರಲಿಲ್ಲ. ಕಟ್ಟಡದ ಸಂಘಟನೆ ಕೂಡಾ ತನ್ನ ಆವರಣದೊಳಗೆ ಪ್ರವೇಶಿಸುವ ಹಾಗೂ ನಿರ್ಗಮಿಸುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ನೋಂದಣಿ ದಾಖಲಾತಿಯನ್ನು ಇಟ್ಟಿರಲಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News