ಉತ್ತರ ಭಾರತ ಭಾರಿ ಮಳೆಗೆ ತತ್ತರ: ಶೇ.37 ರಷ್ಟು ಅತಿವೃಷ್ಟಿ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಳೆದ ಹದಿನೈದು ದಿನಗಳಿಂದ ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಆಗಸ್ಟ್ 22ರಿಂದ ಸೆಪ್ಟೆಂಬರ್ 4ರವರೆಗೆ ಬಿದ್ದಿರುವ ಮಳೆ 14 ವರ್ಷಗಳಲ್ಲೇ ಅತ್ಯಧಿಕ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಪ್ರದೇಶದಲ್ಲಿ ವಾಡಿಕೆ ಮಳೆಯ ಮೂರು ಪಟ್ಟು ಮಳೆಯಾಗಿದ್ದು, ಇಡೀ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.
ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿ ಮಾರ್ಗದಲ್ಲಿ ಮೇಘಸ್ಫೋಟ, ಪಂಜಾಬ್‍ನಲ್ಲಿ ಪ್ರವಾಹ, ದೆಹಲಿಯಲ್ಲಿ ಯಮುನಾ ಪ್ರವಾಹ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಭೂಕುಸಿತ ಸೇರಿದಂತೆ ವ್ಯಾಪಕ ಅನಾಹುತ ಹಾಗೂ ಸಾವು ನೋವು ಸಂಭವಿಸಿದೆ.
ಈ 14 ದಿನಗಳ ಅವಧಿಯಲ್ಲಿ 73.1 ಮಿಲೀಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ 205.3 ಮಿಲಿಮೀಟರ್ ಮಳೆಯಾಗಿದ್ದು, ನಾಲ್ಕು ತಿಂಗಳ ಮುಂಗಾರು ಅವಧಿಯ ಒಟ್ಟು ಮಳೆಯ ಶೇ.35ರಷ್ಟು ಮಳೆ ಈ ಅವಧಿಯಲ್ಲಿ ಆಗಿದೆ. 1988ರ ಬಳಿಕ ಅತ್ಯಧಿಕ ಮಳೆ ಈ ವರ್ಷ ಈ ಭಾಗದಲ್ಲಿ ಬಿದ್ದಿದೆ ಎಂದು ಹವಾಮಾನ ಇಲಾಖೆ ಅಂಕಿ ಅಂಶಗಳು ಹೇಳಿವೆ.
ವಾಯವ್ಯ ಭಾರತದಲ್ಲಿ ಈ ವರ್ಷ ಇದುವರೆಗೆ ಜೂ.1ರಿಂದ 691.7 ಮಿಲಿಮೀಟರ್ ಮಳೆಯಾಗಿದ್ದು, ಇದು ವಾಡಿಕೆಗಿಂತ ಶೇ.37ರಷ್ಟು ಅಧಿಕ. ಸೆ.30ರವರೆಗೆ ಸಾಮಾನ್ಯ ಮಳೆ ಬಿದ್ದರೂ, ಒಟ್ಟು ಮಳೆ 750 ಮಿಲಿಮೀಟರ್ ಮೀರಲಿದೆ. ಇದು 50 ವರ್ಷಗಳಲ್ಲೇ ಎರಡನೇ ಗರಿಷ್ಠ ಮಳೆವರ್ಷವಾಗಲಿದೆ. 1988ರಲ್ಲಿ 813.5 ಮಿಲಿಮೀಟರ್ ಹಾಗೂ 1994ರಲ್ಲಿ 737 ಮಿಲಿಮೀಟರ್ ಮಳೆ ದಾಖಲಾಗಿತ್ತು.
ಈ ಎರಡು ವಾರಗಳ ವ್ಯಾಪಕ ಮಳೆಯಿಂದಾಗಿ ಈ ಭಾಗದ ಅತಿವೃಷ್ಟಿ ಪ್ರಮಾಣ ಶೇ. 11.6ರಿಂದ ಶೇ.37ಕ್ಕೇರಿದೆ. ಪಶ್ಚಿಮ ಪ್ರಕ್ಷುಬ್ಧತೆಯಿಂದಾಗಿ ತೇವಾಂಶಯುಕ್ತ ಗಾಳಿಯ ಹರಿವು ಈ ಭಾಗದಿಂದ ಮೆಡಿಟರೇನಿಯನ್ ಸಾಗರದ ವರೆಗೂ ವ್ಯಾಪಿಸಿದ್ದು, ಇದು ಮುಂಗಾರು ಮಾರುತದ ಜತೆ ಸೇರಿ ವ್ಯಾಪಕ ಮಳೆಗೆ ಕಾರಣವಾಗಿದೆ ಎಂದು ಐಎಂಡಿ ಮುಖ್ಯಸ್ಥ ಮೃತ್ಯುಂಜಯ ಮಹಾಪಾತ್ರ ಹೇಳಿದ್ದಾರೆ.