×
Ad

ಈಶಾನ್ಯ ದಿಲ್ಲಿ ಗಲಭೆ ಪ್ರಕರಣ: ನ್ಯಾಯಾಂಗ ವರ್ಗಾವಣೆಗಳಿಂದ ವಿಚಾರಣೆ ವಿಳಂಬ

Update: 2025-06-04 16:46 IST

ಸಾಂದರ್ಭಿಕ ಚಿತ್ರ | PC : PTI 

 

ಹೊಸದಿಲ್ಲಿ: 2020ರ ಈಶಾನ್ಯ ದಿಲ್ಲಿ ಗಲಭೆಗಳ ಐದು ವರ್ಷಗಳ ಬಳಿಕ ‘ವ್ಯಾಪಕ ಪಿತೂರಿ’ ಪ್ರಕರಣದ ವಿಚಾರಣೆಯು ದಿಲ್ಲಿಯ ಕೆಳನ್ಯಾಯಾಲಯಗಳಲ್ಲಿ ಇತ್ತೀಚಿನ ನ್ಯಾಯಾಧೀಶರ ವರ್ಗಾವಣೆಗಳಿಂದಾಗಿ ಮತ್ತೆ ಹೊಸದಾಗಿ ಆರಂಭವಾಗಲಿದೆ. ಈ ಗಲಭೆಗಳಲ್ಲಿ 53 ಜನರು ಮೃತಪಟ್ಟು,700ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಆರೋಪಗಳ ಮೇಲೆ ವಾದಗಳಿಗಾಗಿ ಜೂ.2ರಂದು ಪ್ರಕರಣವನ್ನು ಪಟ್ಟಿ ಮಾಡಲಾಗಿತ್ತು. ವಿಶೇಷ ಸಾರ್ವಜನಿಕ ಅಭಿಯೋಜಕರು ತಮ್ಮ ವಾದಗಳನ್ನು ಪೂರ್ಣಗೊಳಿಸಿದ್ದಾರೆ ಮತ್ತು ಐದು ಆರೋಪಿಗಳು ಸಹ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ ವಾದಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿತ್ತು.

ಆದಾಗ್ಯೂ,ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ(ಎಎಸ್‌ಜೆ) ಸಮೀರ ಬಾಜಪಾಯಿ ಅವರ ವರ್ಗಾವಣೆಯ ಬಳಿಕ ಈಗ ಎಎಸ್‌ಜೆ ಲಲಿತಕುಮಾರ್ ಅವರು ಹೊಸದಾಗಿ ಪ್ರಕರಣದ ವಿಚಾರಣೆಯನ್ನು ಆರಂಭಿಸಲಿದ್ದಾರೆ. ಇತ್ತೀಚಿಗೆ ನಡೆದ 135 ನ್ಯಾಯಾಧೀಶರ ವರ್ಗಾವಣೆಯು ವಿಚಾರಣೆಯಲ್ಲಿ ಮತ್ತೊಂದು ಹಿನ್ನಡೆಗೆ ಕಾರಣವಾಗಿದೆ.

ನ್ಯಾಯಾಧೀಶರು ವರ್ಗಾವಣೆಗೊಂಡಿರುವುದರಿಂದ ಪ್ರಾಸಿಕ್ಯೂಷನ್, ಆರೋಪಿಗಳು ಮತ್ತು ಅವರ ವಕೀಲರು ವಾದಗಳನ್ನು ಮಂಡಿಸಲು ಕಾಲಮಿತಿಯ ಬಗ್ಗೆ ಪರಸ್ಪರ ಸಮಾಲೋಚಿಸಲು ಸಮಯಾವಕಾಶವನ್ನು ಕೋರಿದ್ದಾರೆ ಎಂದು ಹೇಳಿದ ನ್ಯಾ.ಲಲಿತ ಕುಮಾರ್,ವಾದಗಳನ್ನು ಮಂಡಿಸಲು ತಮ್ಮ ಸಮಯ ಅಂದಾಜುಗಳನ್ನು ಜೂ.6ರೊಳಗೆ ಸಲ್ಲಿಸುವಂತೆ ಅವರಿಗೆ ನಿರ್ದೇಶ ನೀಡಿದರು.

ಮೂಲತಃ ದಿಲ್ಲಿ ಪೋಲಿಸರ ವಿಶೇಷ ಘಟಕದಿಂದ 2020ರಲ್ಲಿ ದಾಖಲಿಸಲ್ಪಟ್ಟ ಈ ಪ್ರಕರಣದಲ್ಲಿ ಇತರ ಕಾಯ್ದೆಗಳೊಂದಿಗೆ ಕಾನೂನು ಬಾಹಿರ ಚಟುವಟಿಕೆಗಳ(ತಡೆ) ಕಾಯ್ದೆಯ ನಿಬಂಧನೆಗಳಡಿ ಆರೋಪಗಳನ್ನು ಹೊರಿಸಲಾಗಿದೆ. ಪ್ರಮುಖ ಆರೋಪಿಗಳಲ್ಲಿ ತಾಹಿರ್ ಹುಸೇನ್,ವಿದ್ಯಾರ್ಥಿ ಕಾರ್ಯಕರ್ತರಾದ ಉಮರ್ ಖಾಲಿದ್,ಶಾರ್ಜೀಲ್ ಇಮಾಂ,ಸಫೂರಾ ಝರ್ಗರ್,ನತಾಶಾ ನರ್ವಾಲ್,ಖಾಲಿದ್ ಸೈಫಿ ಮತ್ತಿತರರು ಸೇರಿದ್ದಾರೆ.

ತನಿಖೆಯಲ್ಲಿ ತಿಂಗಳುಗಟ್ಟಲೆ ವಿಳಂಬದ ಬಳಿಕ ಜೂನ್ 2023ರಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು ಮತ್ತು 2024ರಲ್ಲಿ ನ್ಯಾ.ಬಾಜಪಾಯಿ ಅವರ ನ್ಯಾಯಾಲಯದಲ್ಲಿ ವಾದಗಳು ಆರಂಭಗೊಂಡಿದ್ದವು. ಅದಕ್ಕೂ ಮುನ್ನ ಕೆಲವು ತಿಂಗಳುಗಳ ಕಾಲ ಪ್ರಕರಣದ ವಿಚಾರಣೆ ನಡೆಸಿದ್ದ ಎಎಸ್‌ಜೆ ಅಮಿತಾಭ್ ರಾವತ್ ಅವರು ಕಳೆದ ವರ್ಷ ವರ್ಗಾವಣೆಗೊಂಡಿದ್ದರು.

ಇದೀಗ ವಿಳಂಬವನ್ನು ತಪ್ಪಿಸಲು ನ್ಯಾ.ಲಲಿತಕುಮಾರ್ ಅವರು ಕಾಲಮಿತಿಯಲ್ಲಿ ವಿಚಾರಣೆಗೆ ಒತ್ತು ನೀಡುವ ಸಾಧ್ಯತೆಯಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News