ಎನ್‌ಆರ್‌ಐ ದಂಪತಿಗೆ 15 ಕೋಟಿ ರೂ. ವಂಚನೆ: ಅರ್ಚಕ ಸೇರಿದಂತೆ 8 ಮಂದಿ ಆರೋಪಿಗಳ ಬಂಧನ
PC : freepik
ಹೊಸದಿಲ್ಲಿ, ಜ.24: ಹಿರಿಯ ಅನಿವಾಸಿ ಭಾರತೀಯ ದಂಪತಿಯನ್ನು ‘‘ಡಿಜಿಟಲ್ ಬಂಧನ’’ದಲ್ಲಿರಿಸಿ ಸುಮಾರು 15 ಕೋಟಿ ರೂಪಾಯಿ ಹಣವನ್ನು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಓರ್ವ ಅರ್ಚಕ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಈ ಮೂಲಕ ಕಾಂಬೋಡಿಯ ಮತ್ತು ನೇಪಾಳದಲ್ಲಿ ನೆಲೆ ಹೊಂದಿರುವ ವಂಚಕರೊಂದಿಗೆ ಸಂಪರ್ಕಗಳನ್ನು ಹೊಂದಿದ ಸೈಬರ್ ವಂಚನೆ ಜಾಲವೊಂದನ್ನು ಭೇದಿಸಿದ್ದಾರೆ.
ಬಹು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ, ಗುಜರಾತ್, ಉತ್ತರಪ್ರದೇಶ ಮತ್ತು ಒಡಿಶಾಗಳಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು. ಕಾನೂನು ಅನುಷ್ಠಾನ ಸಂಸ್ಥೆಗಳ ಹೆಸರಿನಲ್ಲಿ ಜನರನ್ನು ಬೆದರಿಸಿ ಅವರ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಬಾಡಿಗೆಗೆ ಪಡೆದ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿಕೊಂಡು ವಂಚಿಸುವ ಅತ್ಯಂತ ವ್ಯವಸ್ಥಿತ ಜಾಲವೊಂದನ್ನು ಈ ಕಾರ್ಯಾಚರಣೆಯ ವೇಳೆ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಜರಾತ್‌ನ ದಿವ್ಯಾಂಗ ಪಟೇಲ್ (30), ಕೃತಿಕ್ ಶಿಟೋಲೆ (26) ಮತ್ತು ಅಂಕಿತ್ ಮಿಶ್ರಾ ಯಾನೆ ರಾಬಿನ್; ಒಡಿಶಾದ ಭುವನೇಶ್ವರದಿಂದ ಮಹಾವೀರ್ ಶರ್ಮಾ ಯಾನೆ ನೀಲ್ (27); ಉತ್ತರಪ್ರದೇಶದ ವಾರಾಣಸಿಯಿಂದ ಪ್ರದ್ಯುಮಾನ್ ತಿವಾರಿ ಯಾನೆ ಎಸ್.ಪಿ. ತಿವಾರಿ (44); ಲಕ್ನೋದಿಂದ ಭೂಪೇಂದ್ರ ಕುಮಾರ್ ಮಿಶ್ರಾ (37) ಮತ್ತು ಆದೇಶ್ ಕುಮಾರ್ ಸಿಂಗ್ (36) ಬಂಧಿತರು.
ಪಟೇಲ್ ಬಿಕಾಮ್ ಪದವೀಧರನಾಗಿದ್ದು, ಸಿಎ (ಇಂಟರ್‌ಮೀಡಿಯಟ್) ಪರೀಕ್ಷೆ ತೇರ್ಗಡೆಯಾಗಿದ್ದಾರೆ. ಅವರು ‘ಫ್ಲೋರೆಸ್ಟ್ ಫೌಂಡೇಶನ್’ ಎಂಬ ಸರಕಾರೇತರ ಸಂಸ್ಥೆಯೊಂದನ್ನು ನಡೆಸುತ್ತಿದ್ದಾನೆ ಹಾಗೂ ‘ತತ್ವ ಬಿಸ್ನೆಸ್ ಅಡ್ವೈಸರ್ಸ್’ ಎಂಬ ತನ್ನ ಸಂಸ್ಥೆಯ ಮೂಲಕ ಹಣಕಾಸು ಸಲಹೆಗಳನ್ನು ಕೊಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಶಿಟೋಲೆ ನ್ಯೂಝಿಲ್ಯಾಂಡ್‌ನಿಂದ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೊಮ ಪಡೆದಿದ್ದಾನೆ.
ಬಂಧಿತರಲ್ಲಿ ಒಬ್ಬನಾಗಿರುವ ಪ್ರದ್ಯುಮಾನ್ ತಿವಾರಿ ಅರ್ಚಕನಾಗಿದ್ದು, ವಾರಾಣಸಿಯ ಘಾಟ್‌ಗಳಲ್ಲಿ ಭಕ್ತರಿಗಾಗಿ ಖಾಸತಿ ಪೂಜೆಗಳನ್ನು ಮಾಡುತ್ತಾನೆ ಎಂದು ಅಧಿಕಾರಿಗಳು ತಿಳಿಸಿದರು.
ದಕ್ಷಿಣ ದಿಲ್ಲಿಯ ಗ್ರೇಟರ್ ಕೈಲಾಶ್‌ನಲ್ಲಿ ವಾಸಿಸುತ್ತಿರುವ 77 ವರ್ಷದ ಮಹಿಳೆಯೊಬ್ಬರಿಗೆ 14.84 ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಇದಾಗಿದೆ.
2025 ಡಿಸೆಂಬರ್‌ನಲ್ಲಿ ಈ ಮಹಿಳೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ಅವರ ಹೆಸರಿನಲ್ಲಿ ಪಡೆದುಕೊಳ್ಳಲಾಗಿರುವ ಸಿಮ್ ಕಾರ್ಡನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಳಸಲಾಗಿದೆ ಎಂದು ಹೇಳಿದ್ದನು. ಬಳಿಕ ವಂಚಕರು ಸಿಬಿಐ ಮತ್ತು ಪೊಲೀಸರ ಹೆಸರಿನಲ್ಲಿ ವೀಡಿಯೊ ಕರೆಗಳನ್ನು ಮಾಡಿ ಮಹಿಳೆಗೆ ನಕಲಿ ಬಂಧನ ವಾರಂಟ್ ತೋರಿಸಿ ನಕಲಿ ‘‘ನ್ಯಾಯಾಲಯ ಕಲಾಪ’’ಗಳನ್ನು ನಡೆಸಿದ್ದರು.
ವಂಚಕರು ಸಂತ್ರಸ್ತೆ ಮತ್ತು ಗಂಡನನ್ನು ದಿನದ 24 ಗಂಟೆಯೂ ವೀಡಿಯೊ ನಿಗಾದಲ್ಲಿ ಇರಿಸಿದ್ದರು. ಅವರು ಯಾರನ್ನಾದರೂ ಸಂಪರ್ಕಿಸಿದರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಬೆದರಿಸಿದ್ದರು. ಅವರನ್ನು ಬೆದರಿಸಿ ‘‘ಪರಿಶೀಲನೆಗಾಗಿ’’ ಅವರ ಹೆಸರಿನಲ್ಲಿರುವ ಠೇವಣಿಗಳು ಮತ್ತು ಶೇರು ಹೂಡಿಕೆಗಳನ್ನು ‘‘ಆರ್‌ಬಿಐ-ಸೂಚಿತ ಖಾತೆ’’ಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದರು. ತಪಾಸಣೆಯ ಬಳಿಕ ಹಣವನ್ನು ಹಿಂದಿರುಗಿಸುವ ಸುಳ್ಳು ಭರವಸೆಯನ್ನೂ ವಂಚಕರು ದಂಪತಿಗೆ ನೀಡಿದ್ದರು.
ದಂಪತಿಯು ಎಂಟು ವ್ಯವಹಾರಗಳ ಮೂಲಕ ಒಟ್ಟು 14.84 ಕೋಟಿ ರೂಪಾಯಿಯನ್ನು ವಂಚಕರು ತಿಳಿಸಿದ ಖಾತೆಗಳಿಗೆ ವರ್ಗಾಯಿಸಿದ್ದರು.