ಉತ್ತರ ಪ್ರದೇಶ | ಮೀರತ್‌ನಲ್ಲಿ ಭೀತಿ ಸೃಷ್ಟಿಸಿದ 'ಬೆತ್ತಲೆ ಗ್ಯಾಂಗ್': ಡ್ರೋನ್ ಮೂಲಕ ಪೊಲೀಸರಿಂದ ಶೋಧ
ಮೀರತ್ : ಉತ್ತರ ಪ್ರದೇಶದ ಮೀರತ್‌ನಲ್ಲಿ 'ಬೆತ್ತಲೆ ಗ್ಯಾಂಗ್' ಭೀತಿಯನ್ನು ಸೃಷ್ಟಿಸಿದೆ. ಆರೋಪಿಗಳು ಬೆತ್ತಲೆಯಾಗಿ ಬಂದು ಮಹಿಳೆಯರನ್ನು ನಿರ್ಜನ ಪ್ರದೇಶಗಳಿಗೆ ಎಳೆದೊಯ್ಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ ಎಂದು NDTV ವರದಿ ಮಾಡಿದೆ.
ಭರಾಲಾ ಗ್ರಾಮದಲ್ಲಿ ಒಬ್ಬಂಟಿಯಾಗಿ ತೆರಳುತ್ತಿದ್ದ ಮಹಿಳೆಯನ್ನು ಇಬ್ಬರು ಪುರುಷರು ಹೊಲಕ್ಕೆ ಎಳೆದುಕೊಂಡು ಹೋಗಲು ಪ್ರಯತ್ನಿಸಿದರು. ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರೂ ಯಾರೂ ಪತ್ತೆಯಾಗಿರಲಿಲ್ಲ. ಆದರೆ ಆರೋಪಿಗಳು ಯಾವುದೇ ಬಟ್ಟೆಗಳನ್ನು ಧರಿಸಿರಲಿಲ್ಲ ಎಂದು ಮಹಿಳೆ ತನ್ನ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾರೆ.
"ಇದು ನಾಲ್ಕನೇ ಘಟನೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಅವಮಾನದ ಭಯದಿಂದಾಗಿ ಹಿಂದಿನ ಘಟನೆಗಳನ್ನು ಯಾರೂ ಬಹಿರಂಗಪಡಿಸಿಲ್ಲ. ಆದರೆ ಈಗ ಭಯದ ವಾತಾವರಣವಿದೆ. ಈ ಗ್ಯಾಂಗ್ ಇಲ್ಲಿಯವರೆಗೆ ಮಹಿಳೆಯರನ್ನು ಮಾತ್ರ ಗುರಿಯಾಗಿಸಿಕೊಂಡಿದೆ" ಎಂದು ಗ್ರಾಮದ ಮುಖ್ಯಸ್ಥ ರಾಜೇಂದ್ರ ಕುಮಾರ್ ಹೇಳಿದರು.
ವಿಷಯದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಯಾವುದೇ ಶಂಕಿತರನ್ನು ಈವರೆಗೆ ಬಂಧಿಸಲಾಗಿಲ್ಲ. ಪೊಲೀಸರು ಹೊಲಗಳಲ್ಲಿಯೂ ಶೋಧ ನಡೆಸಿದ್ದಾರೆ. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಹಲವಾರು ಗಂಟೆಗಳ ಕಾಲ ಡ್ರೋನ್ ಮೂಲಕ ಶೋಧ ಕಾರ್ಯಾಚರಣೆ ನಡೆಯಿತು. ಕಣ್ಗಾವಲಿಗಾಗಿ ಈ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
"ನಾವು ಡ್ರೋನ್‌ಗಳು ಮತ್ತು ಗ್ರಾಮಸ್ಥರ ಸಹಾಯದಿಂದ ಈ ಪ್ರದೇಶದಲ್ಲಿ ಶೋಧ ನಡೆಸಿದ್ದೇವೆ, ಆದರೆ ಯಾವುದೇ ಶಂಕಿತರು ಪತ್ತೆಯಾಗಿಲ್ಲ. ಈ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಶಂಕಿತರಿಗಾಗಿ ಶೋಧ ನಡೆಯುತ್ತಿದೆ" ಎಂದು ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ಹೇಳಿದರು.