×
Ad

ಕೇರಳ ರ‍್ಯಾಗಿಂಗ್ ಪ್ರಕರಣ: ಪ್ರಾಂಶುಪಾಲೆ, ಸಹಾಯಕ ಪ್ರಾಧ್ಯಾಪಕರ ಅಮಾನತು

Update: 2025-02-15 17:39 IST

ಬಂಧಿತ ಆರೋಪಿಗಳು (PTI)

ಕೊಟ್ಟಾಯಂ: ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ನಡೆದಿದ್ದ ಅಮಾನುಷ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಟ್ಟಾಯಂನ ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಓರ್ವ ಸಹಾಯಕ ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಯ ಕುರಿತು ರಾಜ್ಯದಲ್ಲಿ ವ್ಯಾಪಕ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿತ್ತು.

ರ‍್ಯಾಗಿಂಗ್ ಅನ್ನು ಪರಿಶೀಲಿಸಲು ಹಾಗೂ ಈ ವಿಷಯದಲ್ಲಿ ಪರಿಣಾಮಕಾರಿಯಾಗಿ ಮಧ್ಯಪ್ರವೇಶಿಸುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪದ ಮೇಲೆ ಕಾಲೇಜಿನ ಪ್ರಾಂಶುಪಾಲೆ ಸುಲೇಖಾ ಎ.ಟಿ. ಹಾಗೂ ಸಹಾಯಕ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳ ಹಾಸ್ಟೆಲ್ ನ ಉಸ್ತುವಾರಿ ವಾರ್ಡನ್ ಅಜೀಶ್ ಪಿ. ಮಣಿಯ ವಿರುದ್ಧ ವಿಚಾರಣೆಯನ್ನು ಬಾಕಿಯಿರಿಸಿ, ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶುಕ್ರವಾರ ತಡರಾತ್ರಿ ಆರೋಗ್ಯ ಸಚಿವರ ಕಚೇರಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಾಸ್ಟೆಲ್ ನ ಸ್ವಚ್ಛತಾ ಮತ್ತು ಭದ್ರತಾ ಸಿಬ್ಬಂದಿಯನ್ನೂ ತಕ್ಷಣವೇ ಕೆಲಸದಿಂದ ತೆಗೆದು ಹಾಕಬೇಕು ಎಂದೂ ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ನಿರ್ದೇಶನದ ಮೇರೆಗೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು ನಡೆಸಿದ ವಿಚಾರಣೆಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಿರಿಯ ವಿದ್ಯಾರ್ಥಿಯೊಬ್ಬನಿಗೆ ರ‍್ಯಾಗಿಂಗ್ ಮಾಡುತ್ತಿರುವ ವಿಡಿಯೊ ಗುರುವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ಸಂತ್ರಸ್ತ ವಿದ್ಯಾರ್ಥಿಯನ್ನು ಮಂಚಕ್ಕೆ ಕಟ್ಟಿ ಹಾಕಿ, ಕಂಪಾಸ್ ನಲ್ಲಿ ಚುಚ್ಚುತ್ತಿರುವುದು ಸೆರೆಯಾಗಿತ್ತು. ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಡೆದಿದ್ದ ಈ ಕಿರುಕುಳವು ಬಾಲಕರ ಹಾಸ್ಟೆಲ್ ನಲ್ಲಿ ನಡೆದಿತ್ತು.

ಈ ಘಟನೆಯ ಸಂಬಂಧ ಮೂರನೆ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್ (20), ರಾಹುಲ್ ರಾಜ್ (22), ಜೀವ್ (18), ರಿಜಿಲ್ ಜೀತ್ (20) ಹಾಗೂ ವಿವೇಕ್ (21) ಎಂಬವರನ್ನು ಬಂಧಿಸಲಾಗಿದೆ.

ಈ ನಡುವೆ, ಕೊಟ್ಟಾಯಂ ಸರಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿರುವ ರ‍್ಯಾಗಿಂಗ್ ಘಟನೆಯಲ್ಲಿ ಎಡ ಪಕ್ಷಗಳ ವಿದ್ಯಾರ್ಥಿ ಸಂಘಟನೆಯಾದ ಎಸ್ಎಫ್ಐ ಪಾತ್ರವಿದೆ ಎಂದು ಶುಕ್ರವಾರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News