×
Ad

ಮಲಗುವ ಕೋಣೆಯೊಳಗೆ ಹಾವು ಬಿಟ್ಟು ಪತ್ನಿ, 2 ವರ್ಷದ ಪುತ್ರಿಯನ್ನು ಕೊಂದ ವ್ಯಕ್ತಿ

Update: 2023-11-24 11:49 IST

ಸಾಂದರ್ಭಿಕ ಚಿತ್ರ (Credit:mid-day.com)

ಬೆಹ್ರಾಂಪುರ್ (ಒಡಿಶಾ): ಮಲಗುವ ಕೋಣೆಗೆ ವಿಷಪೂರಿತ ಹಾವನ್ನು ಬಿಟ್ಟು ತನ್ನ ಪತ್ನಿ ಹಾಗೂ ಎರಡು ವರ್ಷದ ಪುತ್ರಿಯನ್ನು ಕೊಂದ ಆರೋಪದಲ್ಲಿ 25 ವರ್ಷದ ವ್ಯಕ್ತಿಯೊಬ್ಬನನ್ನು ಒಡಿಶಾದ ಗಂಜಂ ಜಿಲ್ಲೆಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಹ್ರಾಂಪುರದಿಂದ 60 ಕಿಮೀ ದೂರದಲ್ಲಿರುವ ಕಬಿಸೂರ್ಯಾ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಯಿಗಾಂವ್ ಗ್ರಾಮದಲ್ಲಿ ಒಂದೂವರೆ ತಿಂಗಳಿಗಿಂತ ಹಿಂದೆ ಈ ಘಟನೆ ಜರುಗಿದೆ.

ಆರೋಪಿಯನ್ನು 23 ವರ್ಷದ ಕೆ. ಗಣೇಶ್ ಪಾತ್ರ ಎಂದು ಗುರುತಿಸಲಾಗಿದ್ದು, ಆತನಿಗೆ ತನ್ನ ಪತ್ನಿ ಕೆ.ಬಸಂತಿ ಪಾತ್ರಾ(23)ರೊಂದಿಗೆ ಮನಸ್ತಾಪವಿತ್ತು ಎಂದು ಹೇಳಲಾಗಿದೆ. 2020ರಲ್ಲಿ ವಿವಾಹವಾಗಿದ್ದ ಈ ದಂಪತಿಗಳಿಗೆ ದೇಬಸ್ಮಿತ ಎಂಬ ಎರಡು ವರ್ಷದ ಪುತ್ರಿಯಿದ್ದಳು.

ಹಾವಾಡಿಗನಿಗೆ ಧಾರ್ಮಿಕ ಕೆಲಸಕ್ಕಾಗಿ ಹಾವಿನ ಅಗತ್ಯವಿದೆ ಎಂದು ಸುಳ್ಳು ಹೇಳಿ ಆರೋಪಿಯು ಆತನಿಂದ ಹಾವನ್ನು ಖರೀದಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 6ರಂದು ಪ್ಲಾಸ್ಟಿಕ್ ಬಾಟಲಿಯಲ್ಲಿ ನಾಗರಹಾವನ್ನು ತಂದಿರುವ ಆರೋಪಿಯು ತನ್ನ ಪುತ್ರಿಯೊಂದಿಗೆ ಮಲಗಿದ್ದ ಪತ್ನಿಯ ಕೋಣೆಗೆ ಆ ಹಾವನ್ನು ಬಿಟ್ಟಿದ್ದಾನೆ. ಮರು ದಿನ ಬೆಳಗ್ಗೆ ಹಾವು ಕಡಿತದಿಂದ ಇಬ್ಬರೂ ಮೃತಪಟ್ಟಿರುವುದು ಕಂಡು ಬಂದಿದೆ. ಆ ರಾತ್ರಿ ಆರೋಪಿಯು ಮತ್ತೊಂದು ಕೋಣೆಯಲ್ಲಿ ನಿದ್ರಿಸಿದ್ದಾನೆ ಎಂದು ಹೇಳಲಾಗಿದೆ. ಆರಂಭದಲ್ಲಿ ಪೊಲೀಸರು ಅಸಹಜ ಮರಣ ಪ್ರಕರಣ ದಾಖಲಿಸಿಕೊಂಡಿದ್ದರಾದರೂ, ಆತನ ಮಾವ ತನ್ನ ಪುತ್ರಿ ಹಾಗೂ ಮೊಮ್ಮಗಳನ್ನು ತನ್ನ ಅಳಿಯ ಹತ್ಯೆಗೈದಿದ್ದಾನೆ ಎಂದು ದೂರು ನೀಡಿದಾಗ, ಆತನನ್ನು ವಿಚಾರಣೆಗೊಳಪಡಿಸಲಾಯಿತು ಎಂದು ಗಂಜಂ ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ಹೇಳಿದ್ದಾರೆ.

“ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕುವಲ್ಲಿ ಕೊಂಚ ವಿಳಂಬವಾಗಿದ್ದರಿಂದ ಈ ಘಟನೆ ಜರುಗಿದ ಒಂದು ತಿಂಗಳ ನಂತರ ಆತನನ್ನು ಬಂಧಿಸಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ, ಮೊದಮೊದಲು ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ ಆರೋಪಿಯು, ಹಾವು ತಾನಾಗಿಯೇ ಕೋಣೆಯನ್ನು ಪ್ರವೇಶಿಸಿರಬಹುದು ಎಂದು ವಾದಿಸಿದ. ಆದರೆ, ಕೊನೆಗೆ ಅಪರಾಧ ಎಸಗಿರುವುದನ್ನು ಒಪ್ಪಿಕೊಂಡ” ಎಂದು ಹೇಳಿದ ಪೊಲೀಸ್ ವರಿಷ್ಠಾಧಿಕಾರಿ, ಪ್ರಕರಣದ ಕುರಿತು ತನಿಖೆ ಪ್ರಗತಿಯಲ್ಲಿದೆ ಎಂದೂ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News