×
Ad

ರಸ್ತೆ ಅವಘಡದಲ್ಲಿ ಮೃತಪಟ್ಟ ಓಎನ್‌ಜಿಸಿ ಜನರಲ್ ಮ್ಯಾನೇಜರ್ | ಕುಟುಂಬಕ್ಕೆ 2.85 ಕೋಟಿ ರೂ. ಪರಿಹಾರ

Update: 2024-07-27 21:55 IST

PC : PTI 

ಥಾಣೆ : 2022ರ ಜೂನ್‌ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಿಕರಿಗೆ 2.85 ಕೋಟಿ ರೂ. ಪರಿಹಾರ ಧನವನ್ನು ಥಾಣೆಯ ಲೋಕ ಅದಾಲತ್ ಶನಿವಾರ ಘೋಷಿಸಿ ಆದೇಶ ಹೊರಡಿಸಿದೆ. ಲೋಕ ಅದಾಲತ್‌ನ 25 ವರ್ಷಗಳ ಇತಿಹಾಸದಲ್ಲೇ ಅದು ಪ್ರಕಟಿಸಿದ ಗರಿಷ್ಠ ಪರಿಹಾರ ಮೊತ್ತ ಇದಾಗಿದೆ.

2022ರ ಜೂನ್ 19ರಲ್ಲಿ ಓಎನ್‌ಜಿಸಿಯ ಜನರಲ್ ಮ್ಯಾನೇಜರ್ 59 ವರ್ಷದ ಧೀರೇಂದ್ರ ಚಂದ್ರ ಠಾಕೂರ್‌ದಾಸ್ ರಾಯ್ ಅವರಿದ್ದ ವಾಹನಕ್ಕೆ ಟ್ರಕ್ಕೊಂದು ಡಿಕ್ಕಿ ಹೊಡೆದಿತ್ತು. ಅಪಘಾತದ ತೀವ್ರತೆಗೆ ಧೀರೇಂದ್ರ ಅವರ ಕಾರು ಎಸೆಯಲ್ಪಟ್ಟು ಅದು ಪನ್ವೇಲ್-ಸಿಯೋನ್ ರಸ್ತೆಯಲ್ಲಿರುವ ರಾಜ್ಯ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಧೀರೇಂದ್ರ ಚಂದ್ರ ಠಾಕೂರ್‌ದಾಸ್ ರಾಯ್ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಜಿಲ್ಲಾ ನ್ಯಾಯಾಧೀಶ ಎಸ್.ಎಸ್.ಶಿಂಧೆ ಹಾಗೂ ಎಂಎಸಿಟಿ (ಮಹಾರಾಷ್ಟ್ರ ಅವಘಡ ಪರಿಹಾರ ನ್ಯಾಯಾಧೀಕರಣ) ಸದಸ್ಯ ಎಸ್.ಎನ್.ಶಹಾ ಅವರು ಧೀರೇಂದ್ರ ಅವರ ವಿಧವಾಪತ್ನಿ, ಇಬ್ಬರು ಪುತ್ರಿಯರು ಹಾಗೂ 86 ವರ್ಷ ವಯಸ್ಸಿನ ತಾಯಿಯವರಿಗೆ 2.85 ಕೋಟಿ ರೂ. ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಿದರು.

ಅವಘಡದ ಸಮಯದಲ್ಲಿ ಧೀರೇಂದ್ರ ಚಂದ್ರ ಅವರು ಮಾಸಿಕವಾಗಿ 6 ಲಕ್ಷ ರೂ.ಗಳ ವೇತನವನ್ನು ಪಡೆಯುತ್ತಿದ್ದರು ಎಂದು ಮೃತರ ಕುಟುಂಬಿಕರ ಪರ ನ್ಯಾಯವಾದಿ ಎಸ್.ಟಿ.ಕದಂ ತಿಳಿಸಿದ್ದಾರೆ.

ಕಳೆದ ವರ್ಷದ ಫೆಬ್ರವರಿ 23ರಂದು ರಸ್ತೆ ಅವಘಡದಲ್ಲಿ ಮೃತಪಟ್ಟ ಮಾಹಿತಿತಂತ್ರಜ್ಞಾನ ಸಂಸ್ಥೆಯೊಂದರ ಮಾನವಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಮೌಸಮಿ ಮೆಹಂದಳೆ (38)ಯ ಕುಟುಂಬಕ್ಕೆ ಪ್ರತ್ಯೇಕ ಸಮಾರಂಭವೊಂದರಲ್ಲಿ 1.15 ಕೋಟಿ ರೂ.ಗಳ ಪರಿಹಾರವನ್ನು ಘೋಷಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News