ಪಂಜಾಬಿನಲ್ಲಿ ‘ಆಪರೇಷನ್ ಕಮಲ’ಆರಂಭಗೊಂಡಿದೆ : ಆಪ್ ಆರೋಪ
ಸೌರಭ್ ಭಾರದ್ವಾಜ್ | Photo: ANI
ಹೊಸದಿಲ್ಲಿ : ಪಕ್ಷದ ಏಕೈಕ ಲೋಕಸಭಾ ಸಂಸದ ಸುಶೀಲ್ ಕುಮಾರ್ ರಿಂಕು ಅವರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಹಿರಿಯ ಆಪ್ ನಾಯಕ ಸೌರಭ್ ಭಾರದ್ವಾಜ್ ಅವರು ಪಂಜಾಬಿನಲ್ಲಿ ‘ಆಪರೇಷನ್ ಕಮಲ’ ಆರಂಭಗೊಂಡಿದೆ ಎಂದು ಆರೋಪಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರದ್ವಾಜ್, ತಮಗೆ ಬಿಜೆಪಿಗೆ ಸೇರಲು ಹಣ ದೂರವಾಣಿ ಕರೆಗಳು ಬರುತ್ತಿವೆ. ವೈ ದರ್ಜೆಯ ಭದ್ರತೆಯ ಜೊತೆಗೆ ಮುಂಬರುವ ಲೋಕಸಭಾ ಚುನಾವಣೆಗಾಗಿ ಟಿಕೆಟ್ ಗಳ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂದು ಪಂಜಾಬಿನಲ್ಲಿಯ ಅನೇಕ ಆಪ್ ಶಾಸಕರು ಬುಧವಾರ ತಿಳಿಸಿದ್ದರು. ಬಿಜೆಪಿ ಅಲ್ಲಿ ಈಗ ‘ಆಪರೇಷನ್ ಕಮಲ’ ನಡೆಸುತ್ತಿದೆ ಎಂದು ಹೇಳಿದರು.
ಬಿಜೆಪಿಗೆ ಸೇರುವ ರಿಂಕು ನಿರ್ಧಾರವನ್ನು ಪ್ರಶ್ನಿಸಿದ ಅವರು, 2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಪ್, ಎಸ್ಎಡಿ ಮತ್ತು ಕಾಂಗ್ರೆಸ್ ನಂತರ ನಾಲ್ಕನೇ ಸ್ಥಾನದಲ್ಲಿ ಬಿಜೆಪಿ ಇತ್ತು. ರಿಂಕು ಬಿಜೆಪಿಗೆ ಏಕೆ ಸೇರಿದರು ಎನ್ನುವುದು ಪ್ರಶ್ನೆಯಾಗಿದೆ. ಲೋಕಸಭಾ ಸದಸ್ಯರಾಗಿ ಅವರ ಅಧಿಕಾರಾವಧಿಯೂ ಮುಗಿದಿದೆ. ಜಲಂಧರ ಲೋಕಸಭಾ ಚುನಾವಣೆಯಲ್ಲಿ ಈ ಸಲವೂ ಬಿಜೆಪಿ ನಾಲ್ಕನೇ ಸ್ಥಾನದಲ್ಲಿರಲಿದೆ ಎಂದರು.
ಜಲಂಧರ ಲೋಕಸಭಾ ಕ್ಷೇತ್ರಕ್ಕೆ ಆಪ್ ಅಭ್ಯರ್ಥಿಯೆಂದು ಹೆಸರಿಸಲ್ಪಟ್ಟಿದ್ದ ರಿಂಕು ಬುಧವಾರ ಪಕ್ಷದ ಜಲಂಧರ ಪಶ್ಚಿಮ ಶಾಸಕಿ ಶೀತಲ ಅಂಗುರಲ್ ಜೊತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ರಿಂಕು ಕಳೆದ ವರ್ಷ ಜಲಂಧರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ತೊರೆದು ಆಪ್ ಗೆ ಸೇರ್ಪಡೆಗೊಂಡಿದ್ದರು. ಲೋಕಸಭೆಯಲ್ಲಿ ಬಿಜೆಪಿಯ ಕಟು ಟೀಕಾಕಾರರಾಗಿದ್ದ ಅವರು ತನ್ನ ಅಶಿಸ್ತಿನ ಪ್ರತಿಭಟನೆಗಳಿಗಾಗಿ ಸದನದಿಂದ ಅಮಾನತು ಕೂಡ ಆಗಿದ್ದರು.
13 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಪಂಜಾಬಿನಲ್ಲಿ ಪ್ರಬಲ ಶಕ್ತಿಯಾಗಿ ಮೂಡಿ ಬರಲು ಬಿಜೆಪಿ ರಾಜ್ಯದಲ್ಲಿಯ ವಿವಿಧ ರಾಜಕೀಯ ಪಕ್ಷಗಳ ಹಲವು ಪ್ರಭಾವಿ ನಾಯಕರನ್ನು ಸೆಳೆಯುತ್ತಿದ್ದು, ಅದು ರಿಂಕು ಅವರನ್ನು ಲೋಕಸಭಾ ಚುನಾವಣಾ ಕಣಕ್ಕಿಳಿಸುವ ಸಾಧ್ಯತೆಯಿದೆ.