ವಿಶ್ವಾದ್ಯಂತ ಒಂದು ಶತಕೋಟಿಗೂ ಹೆಚ್ಚು ಜನರು ಮಾನಸಿಕ ಆರೋಗ್ಯ ಸ್ಥಿತಿಗಳೊಂದಿಗೆ ಬದುಕುತ್ತಿದ್ದಾರೆ: ವಿಶ್ವ ಆರೋಗ್ಯ ಸಂಸ್ಥೆ
ಸಾಂದರ್ಭಿಕ ಚಿತ್ರ (Image by freepik)
ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆಯು(ಡಬ್ಲ್ಯುಎಚ್‌ಒ) ಮಂಗಳವಾರ ಬಿಡುಗಡೆಗೊಳಿಸುವ ದತ್ತಾಂಶಗಳ ಪ್ರಕಾರ ವಿಶ್ವಾದ್ಯಂತ ಒಂದು ಶತಕೋಟಿಗೂ ಅಧಿಕ ಜನರು ಮಾನಸಿಕ ಆರೋಗ್ಯ ಸ್ಥಿತಿಗಳೊಂದಿಗೆ ಬದುಕುತ್ತಿದ್ದು, ಆತಂಕ ಮತ್ತು ಖಿನ್ನತೆ ಹೆಚ್ಚು ಸಾಮಾನ್ಯವಾಗಿವೆ.
ಮಾನಸಿಕ ಆರೋಗ್ಯ ಸ್ಥಿತಿಗಳು ಎಲ್ಲ ವಯೋಮಾನಗಳ, ಆದಾಯ ಮಟ್ಟಗಳ ಮತ್ತು ಪ್ರದೇಶಗಳ ಜನರ ಮೇಲೆ ಪರಿಣಾಮ ಬೀರುತ್ತಿವೆ ಎಂದು ಡಬ್ಲ್ಯುಎಚ್‌ಒ ಬಿಡುಗಡೆಗೊಳಿಸಿರುವ ಎರಡು ವರದಿಗಳು ಬಹಿರಂಗಗೊಳಿಸಿವೆ.
ಮಾನಸಿಕ ಆರೋಗ್ಯ ಸ್ಥಿತಿಗಳು ಮಹಿಳೆಯರಲ್ಲಿ ಹೆಚ್ಚಾಗಿವೆ. 51.39 ಕೋಟಿ ಪುರುಷರು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಇಂತಹ ಮಹಿಳೆಯರ ಸಂಖ್ಯೆ 58.15 ಕೋಟಿ ಆಗಿದೆ.
ನಿಕಟ ಸಂಗಾತಿಯಿಂದ ಹಿಂಸೆ ಅಥವಾ ಲೈಂಗಿಕ ಹಿಂಸೆಯನ್ನು ಅನುಭವಿಸಿರುವ ಮಹಿಳೆಯರಲ್ಲಿ ಮಾನಸಿಕ ಅಸ್ವಸ್ಥತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಜಾಗತಿಕವಾಗಿ ಮಾನಸಿಕ ಆರೋಗ್ಯ ಸ್ಥಿತಿಯನ್ನು ವಿಶ್ಲೇಷಿಸುವ ವರ್ಲ್ಡ್ ಮೆಂಟಲ್ ಹೆಲ್ತ್ ಟುಡೇ(ಡಬ್ಲ್ಯುಎಂಎಚ್‌ಟಿ) ಹೇಳಿದೆ.
ಇನ್ನೊಂದು ವರದಿ ಮೆಂಟಲ್ ಹೆಲ್ತ್ ಅಟ್ಲಾಸ್ 2024 ಸರಕಾರದ ಮಾನಸಿಕ ಆರೋಗ್ಯ ನೀತಿಗಳನ್ನು ವಿಶ್ಲೇಷಿಸುತ್ತದೆ.
ಮಹಿಳೆಯರಲ್ಲಿ ಆತಂಕ ಮತ್ತು ಖಿನ್ನತೆ ಹೆಚ್ಚು ಸಾಮಾನ್ಯವಾಗಿವೆ ಎಂದು ಬೆಟ್ಟು ಮಾಡಿರುವ ಡಬ್ಲ್ಯುಎಂಎಚ್‌ಟಿ ವರದಿಯು ಪುರುಷರು ಗಮನ-ಕೊರತೆ/ಹೈಪರ್‌ಆ್ಯಕ್ಟಿವಿಟಿ ಡಿಸಾರ್ಡರ್(ಎಡಿಎಚ್‌ಡಿ),ಸ್ವಲೀನತೆ ಅಥವಾ ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್(ಎಎಸ್‌ಡಿ) ಮತ್ತು ನಡವಳಿಕೆಯ ಅಸ್ವಸ್ಥತೆಗಳಿಂದ ಬಳಲುವ ಸಾಧ್ಯತೆ ಹೆಚ್ಚು ಎಂದು ಹೇಳಿದೆ.
2021ರಲ್ಲಿ 7.2 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಿರುವ ವರದಿಯು, ಇದು ಯುವಜನರಲ್ಲಿ ಸಾವುಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ.
2021ರಲ್ಲಿ ಪ್ರತಿ ನೂರು ಸಾವುಗಳಲ್ಲಿ ಆತ್ಮಹತ್ಯೆಗಳ ಪಾಲು ಒಂದಕ್ಕಿಂತ ಹೆಚ್ಚಿತ್ತು ಎಂದಿರುವ ವರದಿಯು, ಆತ್ಮಹತ್ಯೆ ಮಾಡಿಕೊಳ್ಳುವ ಪುರುಷರ ಸಂಖ್ಯೆ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚಿದೆ ಎಂದು ಎತ್ತಿ ತೋರಿಸಿದೆ.
ಆತ್ಮಹತ್ಯೆಯಿಂದ ಪ್ರತಿ ಸಾವಿಗೆ ಹೋಲಿಸಿದರೆ 20ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಯತ್ನಗಳು ನಡೆಯುತ್ತವೆ ಎಂದು ವರದಿಯು ಹೇಳಿದೆ.
ಪ್ರಸ್ತುತ ದರದಲ್ಲಿ 2030ರ ವೇಳೆಗೆ ಆತ್ಮಹತ್ಯೆ ಪ್ರಮಾಣವನ್ನು ಮೂರನೇ ಒಂದರಷ್ಟು ಕಡಿಮೆ ಮಾಡುವ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಯು ಪ್ರಗತಿಯಲ್ಲಿ ತುಂಬ ಹಿಂದೆ ಬಿದ್ದಿದೆ. ಆ ವೇಳೆಗೆ ಕೇವಲ ಶೇ.12ರಷ್ಟು ಇಳಿಕೆಯನ್ನು ಸಾಧಿಸಬಹುದು ಎಂದು ಮುನ್ನಂದಾಜುಗಳು ಸೂಚಿಸಿವೆ.
ಕೆಲವು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜಾಗೃತಿ ಮತ್ತು ಹೆಚ್ಚಿನ ನೀತಿ ಚಟುವಟಿಕೆಯ ಹೊರತಾಗಿಯೂ ಜಾಗತಿಕ ಮಾನಸಿಕ ಆರೋಗ್ಯ ಗುರಿಗಳನ್ನು ಸಾಧಿಸುವುದರಿಂದ ತುಂಬ ದೂರ ಇವೆ ಹಾಗೂ ಹೂಡಿಕೆ,ಸೇವೆಗಳು ಮತ್ತು ಕಾನೂನು ಸುಧಾರಣೆಯನ್ನು ತುರ್ತಾಗಿ ಹೆಚ್ಚಿಸಬೇಕು ಎಂದು ಡಬ್ಲ್ಯುಎಚ್‌ಒ ಎಚ್ಚರಿಕೆ ನೀಡಿದೆ.
ಮಾನಸಿಕ ಆರೋಗ್ಯ ಸ್ಥಿತಿಗಳು ಭಾರೀ ಆರ್ಥಿಕ ಹೊರೆಯನ್ನುಂಟು ಮಾಡುತ್ತವೆ ಎಂದು ಎತ್ತಿ ತೋರಿಸಿರುವ ಅದು,ಆತಂಕ ಮತ್ತು ಖಿನ್ನತೆಯೊಂದೇ ಜಾಗತಿಕ ಆರ್ಥಿಕತೆಗೆ ವಾರ್ಷಿಕ ಒಂದು ಲಕ್ಷ ಕೋಟಿ ಡಾಲರ್ ಗಳ ನಷ್ಟವನ್ನುಂಟು ಮಾಡುತ್ತಿದೆ. ಆದರೂ ಮಾನಸಿಕ ಆರೋಗ್ಯಕ್ಕಾಗಿ ಸರಾಸರಿ ಸರಕಾರಿ ವೆಚ್ಚವು ಒಟ್ಟು ಆರೋಗ್ಯ ಮುಂಗಡಪತ್ರದ ಕೇವಲ ಶೇ.2.1ರಷ್ಟಿದ್ದು,2017ರಿಂದಲೂ ಇದು ಬದಲಾಗದೆ ಉಳಿದುಕೊಂಡಿದೆ ಎಂದು ಹೇಳಿದೆ.
ಹೆಚ್ಚು ಆದಾಯದ ದೇಶಗಳು ಮಾನಸಿಕ ಆರೋಗ್ಯ ಸೇವೆಗಳಿಗಾಗಿ ಪ್ರತಿ ವ್ಯಕ್ತಿಗೆ 65.8 ಡಾಲರ್ ವೆಚ್ಚ ಮಾಡಿದರೆ ಕಡಿಮೆ ಆದಾಯದ ದೇಶಗಳು ಕೇವಲ 0.04 ಡಾಲರ್ ವ್ಯಯಿಸುತ್ತಿವೆ.
ಪರಿಸ್ಥಿತಿಯನ್ನು ಅತ್ಯಂತ ಜ್ವಲಂತ ಸಾರ್ವಜನಿಕ ಆರೋಗ್ಯ ಸಮಸ್ಯೆಗಳಲ್ಲೊಂದು ಎಂದು ಬಣ್ಣಿಸಿರುವ ಡಬ್ಲ್ಯುಎಚ್‌ಒ ಮಹಾ ನಿರ್ದೇಶಕ ಅಧನಾಮ್ ಘೆಬ್ರೆಯೆಸಸ್ ಅವರು,ಮಾನಸಿಕ ಆರೋಗ್ಯದಲ್ಲಿ ಹೂಡಿಕೆ ಎಂದರೆ ಜನರು,ಸಮುದಾಯಗಳು ಮತ್ತು ಆರ್ಥಿಕತೆಯಲ್ಲಿ ಹೂಡಿಕೆಯಾಗಿದೆ,ಯಾವುದೇ ದೇಶವು ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.