×
Ad

ಪಿಎಂ-ಜೆಎವೈ ಅಡಿ 4.6 ಲಕ್ಷಕ್ಕೂ ಅಧಿಕ ಶಂಕಾಸ್ಪದ ಹಕ್ಕು ಕೋರಿಕೆಗಳು ಪತ್ತೆ; ತನಿಖೆಗೆ ರಾಜ್ಯಗಳಿಗೆ ಸೂಚನೆ

Update: 2025-10-19 16:02 IST

ಹೊಸದಿಲ್ಲಿ: ಕೇಂದ್ರ ಸರಕಾರವು ಸೆ.2023ರಿಂದ ಮಾ.2025ರವರೆಗೆ ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯಡಿ(ಎಬಿ-ಪಿಎಂ-ಜೆಎವೈ) 4.6 ಲಕ್ಷಕ್ಕೂ ಅಧಿಕ ಶಂಕಾಸ್ಪದ ಕ್ಲೇಮ್‌ಗಳನ್ನು(ಹಕ್ಕು ಕೋರಿಕೆ) ಪತ್ತೆ ಹಚ್ಚಿದೆ ಎಂದು newindianexpress.com ವರದಿ ಮಾಡಿದೆ.

ವಿಶ್ವದ ಅತಿದೊಡ್ಡ ಸರಕಾರಿ ಆರೋಗ್ಯ ವಿಮಾ ಯೋಜನೆಯಾಗಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (ಎನ್‌ಎಚ್‌ಎ) ಒಟ್ಟು 272 ಕೋಟಿ ರೂ.ಗಳ 1,33,611ಕ್ಕೂ ಅಧಿಕ ಕ್ಲೇಮ್‌ಗಳನ್ನು ವಂಚನೆ ಎಂದೂ ಗುರುತಿಸಿದೆ.

ಮಧ್ಯಪ್ರದೇಶದ ಭೋಪಾಲದಲ್ಲಿ ಎರಡು ದಿನಗಳ ರಾಷ್ಟ್ರೀಯ ಪುನರ್‌ಪರಿಶೀಲನೆ ಸಭೆಯಲ್ಲಿ ಬಿಡುಗಡೆ ಮಾಡಲಾದ ಎನ್‌ಎಚ್‌ಎ ವಾರ್ಷಿಕ ವರದಿ 2024-25ರ ಪ್ರಕಾರ, ಹಣ ಪಾವತಿಯನ್ನು ಮಾಡುವ ಮೊದಲೇ ಕ್ಲೇಮ್‌ಗಳನ್ನು ತಿರಸ್ಕರಿಸಲಾಗಿತ್ತು.

ಹೆಚ್ಚಿನ ತನಿಖೆಗಾಗಿ 4,63,669ಕ್ಕೂ ಹೆಚ್ಚಿನ ಶಂಕಾಸ್ಪದ ಕ್ಲೇಮ್‌ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ. ಪಶ್ಚಿಮ ಬಂಗಾಳವು ಯೋಜನೆಯನ್ನು ಜಾರಿಗೊಳಿಸಿರದ ಏಕೈಕ ರಾಜ್ಯವಾಗಿದೆ. ಎನ್‌ಎಚ್‌ಎಯ ರಾಷ್ಟ್ರೀಯ ವಂಚನೆ ನಿಗ್ರಹ ಘಟಕ (ಎನ್‌ಎಎಫ್‌ಯು) ತಂಡವು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 120 ಜಂಟಿ ಕ್ಷೇತ್ರ ವೈದ್ಯಕೀಯ ಲೆಕ್ಕಪರಿಶೋಧನೆಗಳನ್ನು ನಡೆಸಿದೆ. ಜೊತೆಗೆ ರಾಜ್ಯಗಳಾದ್ಯಂತ 2,283ಕ್ಕೂ ಅಧಿಕ ಡೆಸ್ಕ್ ಮೆಡಿಕಲ್ ಆಡಿಟ್‌ಗಳನ್ನೂ ನಡೆಸಲಾಗಿದೆ ಮತ್ತು ಅನುಮಾನಾಸ್ಪದ ಸಂಸ್ಥೆಗಳ ವಿವರಗಳನ್ನು ಹೆಚ್ಚಿನ ತನಿಖೆಗಾಗಿ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಯೋಜನೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ವಿಶ್ವಾಸವನ್ನು ಬೆಳೆಸುವಲ್ಲಿ ವಂಚನೆ ನಿಗ್ರಹ ಚೌಕಟ್ಟನ್ನು ಸಾಂಸ್ಥಿಕಗೊಳಿಸುವುದು ಮುಖ್ಯವಾಗಿದೆ ಎಂದು ಒತ್ತಿ ಹೇಳಿರುವ ವರದಿಯು,ಭವಿಷ್ಯದಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ಮತ್ತು ಕಪಟ ಕ್ಲೇಮ್‌ಗಳನ್ನು ಪೂರ್ವಭಾವಿಯಾಗಿ ಪತ್ತೆ ಹಚ್ಚಲು ಮತ್ತು ತಡೆಯಲು ಮುನ್ಸೂಚಕ ವಿಶ್ಲೇಷಣೆ,ನೈಜ ಸಮಯದ ಮೇಲ್ವಿಚಾರಣೆ ಮತ್ತು ಸ್ವಯಂಚಾಲಿತ ತಪಾಸಣೆಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಏಳು ವರ್ಷಗಳ ಹಿಂದೆ ಆರಂಭಗೊಂಡ ಆಯುಷ್ಮಾನ ಭಾರತ ಯೋಜನೆಯು ಅರ್ಹ ಕುಟುಂಬಗಳಿಗೆ ವಾರ್ಷಿಕ ಐದು ಲಕ್ಷ ರೂ.ಗಳ ಆರೋಗ್ಯ ವಿಮೆಯನ್ನು ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News