ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿಯು ರಾಜಕೀಯ ಲಾಭಕ್ಕಾಗಿ ಕಾಯುತ್ತಿರುತ್ತದೆ : ಅಖಿಲೇಶ್ ಯಾದವ್ ವಾಗ್ದಾಳಿ
ಅಖಿಲೇಶ್ ಯಾದವ್ | PTI
ಲಕ್ನೊ: ನಿನ್ನೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆಗೈದಿದ್ದ ಭಯೋತ್ಪಾದಕರ ದಾಳಿಗೆ ಸಂಬಂಧಿಸಿದಂತೆ, ‘ಭಯೋತ್ಪಾದಕರು ಸಂತ್ರಸ್ತರ ಧರ್ಮ ಕೇಳಿದರೇ ಹೊರತು, ಜಾತಿಯನ್ನಲ್ಲ’ ಎಂಬ ಪೋಸ್ಟರ್ ಅನ್ನು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದ ಬಿಜೆಪಿಯ ವಿರುದ್ಧ ಬುಧವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ “ಭಯೋತ್ಪಾದಕರು ಧರ್ಮವನ್ನು ಕೇಳಿದರೇ ಹೊರತು, ಜಾತಿಯನ್ನಲ್ಲ. ಇದನ್ನು ನೆನಪಿಟ್ಟುಕೊಳ್ಳುತ್ತೇವೆ” ಎಂಬ ಪೋಸ್ಟರ್ ಅನ್ನು ಛತ್ತೀಸ್ ಗಢದ ಬಿಜೆಪಿ ಘಟಕ ಬಿಡುಗಡೆ ಮಾಡಿತ್ತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, “ಬಿಜೆಪಿ ತಾನೊಂದು ಸಂವೇದನಾರಹಿತ ಪಕ್ಷವೆಂಬುದನ್ನು ಸಾಬೀತು ಪಡಿಸಿದೆ. ಈ ಪಾಪಕ್ಕಾಗಿ ಬಿಜೆಪಿಯ ಕಟ್ಟಾ ಬೆಂಬಲಿಗರೂ ಅದನ್ನು ಕ್ಷಮಿಸುವುದಿಲ್ಲ. ಬಿಜೆಪಿಯು ಯಾವಾಗಲೂ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯುವ ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
“ಪಹಲ್ಗಾಮ್ ಭಯೋತ್ಪಾದಕ ದಾಳಿಯು ಕೇಂದ್ರ ಸರಕಾರದ ವೈಫಲ್ಯವಾಗಿದೆ. ಬಿಜೆಪಿಯು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಜಮ್ಮು ಮತ್ತು ಕಾಶ್ಮೀೂರದಲ್ಲಿ ಏನೆಲ್ಲ ಮಾಡಬೇಕಿತ್ತೊ, ಅದೆಲ್ಲವನ್ನೂ ಮಾಡಿದೆ. ಇದು ಕೇಂದ್ರ ಸರಕಾರದ ವೈಫಲ್ಯವಾಗಿದೆ. ಒಂದು ವೇಳೆ ಕೇಂದ್ರ ಸರಕಾರವೇನಾದರೂ ಜಾಗೃತವಾಗಿದ್ದಿದ್ದರೆ, ಈ ದಾಳಿಯನ್ನು ತಪ್ಪಿಸಬಹುದಿತ್ತು” ಎಂದೂ ಅವರು ಆರೋಪಿಸಿದ್ದಾರೆ.
ಕೇಂದ್ರ ಸರಕಾರವೇಕೆ ಪಹಲ್ಗಾಮ್ ನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸಿರಲಿಲ್ಲ ಎಂದೂ ಪ್ರಶ್ನಿಸಿರುವ ಅವರು, “ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಕಾಶ್ಮೀರಕ್ಕೆ ಭೇಟಿ ನೀಡುವಂತೆ ಜನರನ್ನು ಉತ್ತೇಜಿಸುತ್ತಿವೆ. ಅಂದಮೇಲೆ, ಅವರೇಕೆ ಪ್ರವಾಸಿಗರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸಲಿಲ್ಲ? ಇದೊಂದು ರಾಜಕೀಯ ವೈಫಲ್ಯ ಕೂಡಾ” ಎಂದು ಅವರು ಟೀಕಾಪ್ರಹಾರ ನಡೆಸಿದ್ದಾರೆ.