ವಿವಾಹಕ್ಕೂ ಮುನ್ನ ಪೋಷಕರ ಸಮ್ಮತಿ ಕಡ್ಡಾಯಗೊಳಿಸಲು ಕಾನೂನು ಜಾರಿಗೆ ತರಬೇಕು: ಹರ್ಯಾಣ ಬಿಜೆಪಿ ಶಾಸಕ
Update: 2025-08-27 14:05 IST
ಸಾಂದರ್ಭಿಕ ಚಿತ್ರ (Photo: PTI)
ಚಂಡೀಗಢ: ವಿವಾಹಕ್ಕೂ ಮುನ್ನ ಪೋಷಕರ ಸಮ್ಮತಿ ಪಡೆಯುವುದನ್ನು ಕಡ್ಡಾಯಗೊಳಿಸಲು ಕಾನೂನು ಜಾರಿಗೆ ತರಬೇಕು ಎಂದು ಹರ್ಯಾಣ ಬಿಜೆಪಿ ಶಾಸಕ ರಾಮ್ ಕುಮಾರ್ ಗೌತಮ್ ಆಗ್ರಹಿಸಿದ್ದಾರೆ.
ಮಂಗಳವಾರ ವಿಧಾನಸಭಾ ಕಲಾಪದಲ್ಲಿನ ಶೂನ್ಯವೇಳೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಫಿದೋನ್ ವಿಧಾನಸಭಾ ಕ್ಷೇತ್ರದ ಶಾಸಕ ರಾಮ್ ಕುಮಾರ್ ಗೌತಮ್, ಹಾಲಿ ಸ್ಥಿತಿಯಲ್ಲಿ ಈ ಕಾನೂನು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
“ಬಾಲಕರು ಹಾಗೂ ಬಾಲಕಿಯರು ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ. ನಂತರ ಪೋಷಕರು ಆತ್ಮಹತ್ಯೆ ಮಾಡಿಕೊಳ್ಳುವ ಅನಿವಾರ್ಯತೆಗೀಡಾಗಿರುವ ಪ್ರಕರಣಗಳಿವೆ. ವಿವಾಹಕ್ಕೂ ಮುನ್ನ ಬಾಲಕರು ಹಾಗೂ ಬಾಲಕಿಯರು ಪೋಷಕರ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವಂಥ ಕಾನೂನು ತರಬೇಕು ಎಂಬುದು ನನ್ನ ಮನವಿಯಾಗಿದೆ” ಎಂದು ಅವರು ಹೇಳಿದ್ದಾರೆ.
ರಾಮ್ ಕುಮಾರ್ ಗೌತಮ್ ಅವರು 2024ರ ಹರ್ಯಾಣ ವಿಧಾನಸಭಾ ಚುನಾವಣೆಯ ಸಂದರ್ಭ ಜೆಜೆಪಿ ತೊರೆದು ಬಿಜೆಪಿ ಸೇರಿದ್ದರು.