×
Ad

ಬಿಹಾರ | ಕ್ಲಿನಿಕ್‌ನಲ್ಲಿ ಯೂಟ್ಯೂಬ್ ನೋಡಿ ಚಿಕಿತ್ಸೆ ನೀಡಿದ್ದರಿಂದ ಯುವಕ ಮೃತ್ಯು: ಕುಟುಂಬಸ್ಥರ ಆರೋಪ

Update: 2025-02-17 12:00 IST

Photo credit: etvbharat.com

ಪಾಟ್ನಾ: ಖಾಸಗಿ ಕ್ಲಿನಿಕ್ ನ ವೈದ್ಯರೊಬ್ಬರು ಯೂಟ್ಯೂಬ್ ವಿಡಿಯೊ ನೋಡಿಕೊಂಡು ಚಿಕಿತ್ಸೆ ನೀಡಿದ್ದರಿಂದ ರೋಗಿಯೊಬ್ಬರು ಮೃತಪಟ್ಟಿದ್ದಾರೆನ್ನಲಾದ ಘಟನೆ  ನಡೆದಿದೆ.

ಮೃತ ಯುವಕನನ್ನು ದೀಪಕ್ ಪಾಸ್ವಾನ್ (24) ಎಂದು ಗುರುತಿಸಲಾಗಿದ್ದು, ಆತ ಕೇಂದ್ರೀಯ ಕೈಗಾರಿಕಾ ಭದ್ರತೆ ಪಡೆಗೆ ಉದ್ಯೋಗಕ್ಕೆ ಸೇರ್ಪಡೆಯಾಗಬೇಕಿತ್ತು. ಆದರೆ, ಆತನಿಗೆ ಶನಿವಾರ ಸಂಜೆ ವಾಂತಿ ಕಾಣಿಸಿಕೊಂಡಿದ್ದರಿಂದ, ಇಲ್ಲಿನ ಕದಮ್ ಕ್ವಾನ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಜೇಂದ್ರ ನಗರ ರಸ್ತೆ ಸಂಖ್ಯೆ 3ರಲ್ಲಿರುವ ಖಾಸಗಿ ಕ್ಲಿನಿಕ್ ಒಂದಕ್ಕೆ ದಾಖಲಾಗಿದ್ದರು. ಆದರೆ, ವೈದ್ಯರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ದೀಪಕ್ ಪಾಸ್ವಾನ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೆ ಕ್ಲಿನಿಕ್ ಅನ್ನು ಧ್ವಂಸಗೊಳಿಸಿರುವ ಆತನ ಸಂಬಂಧಿಕರು, ವೈದ್ಯರು ಯೂಟ್ಯೂಬ್ ವಿಡಿಯೊ ನೋಡಿಕೊಂಡು ಚಿಕಿತ್ಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಪಾಸ್ವಾನ್ ಸಹೋದರ, “ಒಂದು ವೇಳೆ ಅಲ್ಲಿ ವೈದ್ಯರಿದ್ದು, ಆತನಿಗೆ ಸೂಕ್ತ ಚಿಕಿತ್ಸೆ ಒದಗಿಸಿದ್ದರೆ, ಆತ ಬದುಕುಳಿದಿರುತ್ತಿದ್ದ” ಎಂದು ಆಪಾದಿಸಿದ್ದಾರೆ. ನನ್ನ ಸಹೋದರ ಪಾಸ್ವಾನ್ ಇನ್ನು 24 ಗಂಟೆಯೊಳಗೆ ಗುಣಮುಖವಾಗಲಿದ್ದಾನೆ ಎಂದು ಕ್ಲಿನಿಕ್ ನ ವೈದ್ಯರು ಭರವಸೆ ನೀಡಿದ್ದರು ಎಂದೂ ಅವರು ದೂರಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೆ ಸ್ಥಳಕ್ಕೆ ಧಾವಿಸಿದ ಕದಮ್ ಕ್ವಾನ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮೃತದೇಹವನ್ನು ಮರೋತ್ತರ ಪರೀಕ್ಷೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯ ವರದಿಯನ್ನು ಸಿದ್ಧಪಡಿಸಲಾಗಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸದರ್ ಉಪ ವಿಭಾಗ ಪೊಲೀಸ್ ಅಧಿಕಾರಿ ದೀಕ್ಷಾ ತಿಳಿಸಿದ್ದಾರೆ.

ಈ ಸಂಬಂಧ ಪಾಸ್ವಾನ್ ಕುಟುಂಬದ ಸದಸ್ಯರು ಕದಮ್ ಕ್ವಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News