ಆಂಧ್ರ ಪ್ರದೇಶದ ನೂತನ ಉಪಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ನೇಮಕ
Update: 2024-06-14 16:58 IST
ಪವನ್ ಕಲ್ಯಾಣ್ (PTI)
ಹೊಸದಿಲ್ಲಿ: ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಎನ್ ಚಂದ್ರಬಾಬು ನಾಯ್ಡು ತಮ್ಮ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದು, ಅದರಂತೆ ಜನ ಸೇನಾ ಪಾರ್ಟಿ ಅಧ್ಯಕ್ಷ ಹಾಗೂ ನಟ ಕೊನಿಡೇಲ ಪವನ್ ಕಲ್ಯಾಣ್ ಅವರು ರಾಜ್ಯದ ಉಪಮುಖ್ಯಮಂತ್ರಿಯಾಗಲಿದ್ದಾರೆ.
ಉಪ ಮುಖ್ಯಮಂತ್ರಿ ಹುದ್ದೆಯೊಂದಿಗೆ ಪವನ್ ಕಲ್ಯಾಣ್ ಅವರು ಪಂಚಾಯತಿ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಹಿತ ಪರಿಸರ, ಅರಣ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಗಳನ್ನೂ ನಿರ್ವಹಿಸಲಿದ್ದಾರೆ.
ಐವತ್ತೈದು ವರ್ಷದ ಪವನ್ ಕಲ್ಯಾಣ್ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಿತಾಪುರಂ ಕ್ಷೇತ್ರದಿಂದ ಗೆದ್ದಿದ್ದರು.
ಆಂಧ್ರ ಪ್ರದೇಶದಲ್ಲಿ ಬಿಜೆಪಿ ಮತ್ತು ಟಿಡಿಪಿ ಚುನಾವಣಾ ಪೂರ್ವ ಮೈತ್ರಿ ಸಾಧಿಸುವಲ್ಲಿ ಪವನ್ ಕಲ್ಯಾಣ್ ಮಹತ್ವದ ಪಾತ್ರ ನಿರ್ವಹಿಸಿದ್ದರೆಂದು ಹೇಳಲಾಗಿದೆ.