×
Ad

ಗುಡಿಸಲಿನಲ್ಲಿ ಸಂಭ್ರಮಾಚರಣೆ ನಡೆಸಿದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಪವನ್ ಕುಮಾರ್

Update: 2024-04-17 21:26 IST

Screengrab from the video | PC: X

ಬುಲಂದ್‌‌ಶಹರ್ (ಉತ್ತರ ಪ್ರದೇಶ): 2023ರ ಕೇಂದ್ರ ಲೋಕಸೇವಾ ಆಯೋಗ ಪರೀಕ್ಷೆಯ ಫಲಿತಾಂಶವು ಹಲವಾರು ಯಶೋಗಾಥೆಗಳನ್ನು ಬೆಳಕಿಗೆ ತರುತ್ತಿದೆ. ಇಂತಹುದೇ ಒಂದು ಯಶೋಗಾಥೆ ತಮ್ಮ ಗುಡಿಸಲಿನಲ್ಲಿ ಸಂಭ್ರಮಾಚರಣೆ ನಡೆಸುತ್ತಿರುವ ಯುಪಿಎಸ್‌ಸಿ ಪರೀಕ್ಷೆಯಲ್ಲಿ 239ನೇ ರ‍್ಯಾಂಕ್ ಪಡೆದಿರುವ ಉತ್ತರ ಪ್ರದೇಶದ ಪವನ್ ಕುಮಾರ್‌ ರದು.

ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಬುಲಂದ್‌ಶಹರ್ ಜಿಲ್ಲೆಯಲ್ಲಿನ ತಮ್ಮ ಮನೆಯಲ್ಲಿ ತಮ್ಮ ಕುಟುಂಬದ ಸದಸ್ಯರಿಗೆ ಪವನ್ ಕುಮಾರ್ ಸಿಹಿ ಹಂಚುತ್ತಿರುವುದನ್ನು ಕಾಣಬಹುದಾಗಿದೆ. ಈ ಸನ್ನಿವೇಶವು ವಿಧು ವಿನೋದ್ ಚೋಪ್ರಾರ 12th Fail ಚಿತ್ರದಲ್ಲಿ ತೆರೆದಿಡಲಾಗಿದ್ದ ಐಪಿಎಸ್ ಅಧಿಕಾರಿ ಮನೋಜ್ ಶರ್ಮ ಎದುರಿಸಿದ್ದ ಆರ್ಥಿಕ ಬಿಕ್ಕಟ್ಟನ್ನೇ ಪವನ್ ಕುಮಾರ್ ಕೂಡಾ ಹಾದು ಬಂದಿರುವುದನ್ನು ಸೂಚಿಸುತ್ತಿದೆ. ಆ ವೀಡಿಯೊದಲ್ಲಿ ಪವನ್ ಕುಮಾರ್ ಕುಟುಂಬದ ಸದಸ್ಯರು ತಾತ್ಕಾಲಿಕ ಶೆಡ್ ಕೆಳಗೆ ಆಸೀನರಾಗಿರುವುದೂ ಕಂಡು ಬರುತ್ತಿದೆ.

ಈ ವೀಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಐಎಎಸ್ ಅಧಿಕಾರಿ ಅವನೀಶ್ ಶರಣ್, " ಇದು ಪವನ್ ಮನೆ. ಆತ ನಾಗರಿಕ ಸೇವಾ ಪರೀಕ್ಷೆಯಲ್ಲಿ 239ನೇ ರ‍್ಯಾಂಕ್ ಪಡೆದಿದ್ದಾನೆ. ಕಠಿಣ ಪರಿಶ್ರಮ ಪಡುವ ಜನರು ತಮ್ಮ ಭವಿಷ್ಯವನ್ನು ತಾವೇ ಬರೆದುಕೊಳ್ಳುತ್ತಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವಾರು ನೆಟ್ಟಿಗರು, ಪವನ್ ಕುಮಾರ್ ಸಾಧನೆಯನ್ನು ಅಭಿನಂದಿಸಿದ್ದಾರೆ.

ವರದಿಗಳ ಪ್ರಕಾರ, ಪವನ್ ಕುಮಾರ್ ಉತ್ತರ ಪ್ರದೇಶದ ರಘುನಾಥ್‌ಪುರ್ ಗ್ರಾಮದ ನಿವಾಸಿಯಾಗಿದ್ದು, ಅವರ ತಂದೆ ರೈತರಾಗಿದ್ದಾರೆ. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದ್ದ ಪವನ್ ಕುಮಾರ್ ನಂತರ, ನಾಗರಿಕ ಸೇವೆಗಳ ಪರೀಕ್ಷೆಗೆ ಸಿದ್ಧವಾಗಲು ದಿಲ್ಲಿಗೆ ವಾಸ್ತವ್ಯ ಬದಲಿಸಿದ್ದರು ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News