ಡಿಪಿಡಿಪಿ ಕಾಯ್ದೆಯ ನಿಬಂಧನೆಗಳ ಬಗ್ಗೆ ಕಳವಳ; 21 ಪತ್ರಿಕಾ ಸಂಸ್ಥೆಗಳು ಸೇರಿದಂತೆ ಪ್ರೆಸ್ ಕ್ಲಬ್ ಆಫ್ ಇಂಡಿಯಾದಿಂದ ಸರಕಾರಕ್ಕೆ ಪತ್ರ
ಅಶ್ವಿನಿ ವೈಷ್ಣವ್ | PC : PTI
ಹೊಸದಿಲ್ಲಿ: ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ (ಡಿಪಿಡಿಪಿ) ಕಾಯ್ದೆ 2023 ರ ನಿಬಂಧನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾವು 21 ಪತ್ರಿಕಾ ಸಂಸ್ಥೆಗಳು, ಸಾವಿರಾರು ಪತ್ರಕರ್ತರು ಮತ್ತು ಫೊಟೋ ಜರ್ನಲಿಸ್ಟ್ ಗಳೊಂದಿಗೆ ಸರಕಾರಕ್ಕೆ ಪತ್ರ ಬರೆದಿದೆ. ಈ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕಾದ ವೃತ್ತಿ ನಿರ್ವಹಿಸುವುದಕ್ಕೆ ವಿರುದ್ಧವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾವು ಇತರ ಪತ್ರಿಕಾ ಸಂಸ್ಥೆಗಳು ಮತ್ತು ಪತ್ರಕರ್ತರೊಂದಿಗೆ ಜಂಟಿಯಾಗಿ ಈ ಕುರಿತಂತೆ ಮನವಿ ಪತ್ರವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಲ್ಲಿಸಿದೆ. ಮುದ್ರಣ ಮಾಧ್ಯಮ, ಆನ್‌ಲೈನ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕೆಲಸ ನಿರ್ವಹಿಸುವ ಪತ್ರಕರ್ತರನ್ನು ಡಿಪಿಡಿಪಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಇಡುವಂತೆ ಒತ್ತಾಯಿಸಿದೆ ಎಂದು ಪಿಸಿಐ ಜೂನ್ 25 ರಂದು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟನೆ ತಿಳಿಸಿದೆ.
ಡಿಜಿಟಲ್ ವೈಯಕ್ತಿಕ ಮಾಹಿತಿ ಸಂರಕ್ಷಣಾ(ಡಿಪಿಡಿಪಿ) ಕಾಯ್ದೆಯ ವಿವಿಧ ವ್ಯಾಖ್ಯಾನಗಳು ಮತ್ತು ನಿಬಂಧನೆಗಳ ನಿಕಟ ಅಧ್ಯಯನದ ನಂತರ, ಅದು ಪತ್ರಕರ್ತರ ಮೂಲಭೂತ ಹಕ್ಕಾದ ಸಂವಿಧಾನದ 19 (1) (ಎ) ಮತ್ತು (ಜಿ) ವಿಧಿಗೆ ವಿರುದ್ಧವಾಗಿದೆ ಎಂದು ಮನವರಿಕೆಯಾಗಿದೆ. ಈ ಕುರಿತಂತೆ ಕಾನೂನು ಮತ್ತು ವೈಯಕ್ತಿಕ ದತ್ತಾಂಶ ತಜ್ಞರೊಂದಿಗೆ ಸಮಾಲೋಚಿಸಿ ಕಾಯ್ದೆಯ ಬಗ್ಗೆ ತಮ್ಮ ಕಳವಳಗಳನ್ನು ಮನವಿ ಪತ್ರದಲ್ಲಿ ತಿಳಿಸಲಾಗಿದೆ ಎಂದು ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.
ಮಸೂದೆಯ ಕರಡು ರಚನೆಯ ಹಂತದಲ್ಲಿ ಪತ್ರಿಕಾ ವೃತ್ತಿಯನ್ನು ಕಾಯ್ದೆಯಿಂದ ಹೊರಗಿಡಲಾಗಿದ್ದರೂ, ಸಚಿವಾಲಯವು ಆ ಬಳಿಕ ಪತ್ರಿಕಾ ವೃತ್ತಿಯನ್ನು ತನ್ನ ವ್ಯಾಪ್ತಿಗೆ ತರುತ್ತಿರುವುದಕ್ಕೆ ವಿವಿಧ ರಾಜ್ಯಗಳಲ್ಲಿರುವ 22 ಪತ್ರಿಕಾ ಸಂಸ್ಥೆಗಳು ತೀವ್ರ ಕಳವಳ ವ್ಯಕ್ತಪಡಿಸಿವೆ.
ಈ ಕುರಿತಂತೆ ಮನವಿ ಪತ್ರವನ್ನು ಪ್ರೆಸ್ ಕ್ಲಬ್ ಆಫ್ ಇಂಡಿಯಾ(ಪಿಸಿಐ)ದ ಅಧ್ಯಕ್ಷ ಗೌತಮ್ ಲಹಿರಿ ಮತ್ತು ಪ್ರಧಾನ ಕಾರ್ಯದರ್ಶಿ ನೀರಜ್ ಠಾಕೂರ್ ಅವರು ಹೊಸದಿಲ್ಲಿಯಲ್ಲಿರುವ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ(ಪಿಐಬಿ)ದ ಪ್ರಧಾನ ಮಹಾನಿರ್ದೇಶಕ ಧೀರೇಂದ್ರ ಓಜಾ ಮೂಲಕ ಅವರಿಗೆ ಸಲ್ಲಿಸಿದ್ದಾರೆ.
"ನಾವು ನಿನ್ನೆ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ(ಪಿಐಬಿ)ದ ಪ್ರಧಾನ ಮಹಾನಿರ್ದೇಶಕ ಧೀರೇಂದ್ರ ಓಜಾ ಅವರ ಮೂಲಕ ಮನವಿ ಪತ್ರವನ್ನು ಸಲ್ಲಿಸಿದ್ದೇವೆ. ಈ ಕುರಿತು ಸ್ಪಷ್ಟೀಕರಣ ನೀಡುವಂತೆ ಸಚಿವರನ್ನು ಭೇಟಿಗೆ ಸಮಯ ಕೇಳಿದ್ದೇವೆ. ಪ್ರಧಾನ ಮಹಾನಿರ್ದೇಶಕರ ಕಚೇರಿಯು ಸಚಿವರ ಕಚೇರಿಗೆ ಮನವಿ ಪತ್ರವನ್ನು ಕಳುಹಿಸಲಾಗಿದೆ ಎಂದು ದೃಢಪಡಿಸಿದೆ. ಭೇಟಿಯ ಕುರಿತು ಅವರಿಗೆ ತಿಳಿಸುವುದಾಗಿ ಪಿಡಿಜಿ ಭರವಸೆ ನೀಡಿದೆ. ಕಾಯ್ದೆಯಿಂದ ಪತ್ರಿಕಾ ವೃತ್ತಿಯನ್ನು ಹೊರಗಿಡುವುದರ ಕುರಿತು ಸಚಿವರು ನಮ್ಮ ಮನವಿಯನ್ನು ಸ್ವೀಕರಿಸುತ್ತಾರೆ ಮತ್ತು ನಮ್ಮ ಅನುಮಾನಗಳನ್ನು ಪರಿಹರಿಸುತ್ತಾರೆ ಎಂಬ ಭವರಸೆಯಿದೆ”, ಎಂದು ಪಿಸಿಐ ಅಧ್ಯಕ್ಷ ಗೌತಮ್ ಲಹಿರಿ ಹೇಳಿದ್ದಾರೆ.
ಈ ಮನವಿ ಪತ್ರವು ಮೇ 2025 ರಲ್ಲಿ ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಪ್ರಾರಂಭಿಸಿದ ಸಹಿ ಅಭಿಯಾನದ ಭಾಗವಾಗಿದೆ. ಮುದ್ರಣ, ಆನ್‌ಲೈನ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವರದಿಗಾರರು ಮತ್ತು ಫೊಟೋ ಜರ್ನಲಿಸ್ಟ್ ಗಳ ವೃತ್ತಿಗೆ ಅಡ್ಡಿಯಾಗದಂತೆ ಕಾಯಿದೆಯಲ್ಲಿ ನಿರ್ಣಾಯಕ ಬದಲಾವಣೆಯನ್ನು ತರಲು ಸಚಿವಾಲಯದ ಮೇಲೆ ಒತ್ತಡ ಹೇರಲು ಈ ಮನವಿ ಪತ್ರವನ್ನು ಬರೆಯಲಾಗಿದೆ.
ಈ ಅಭಿಯಾನವನ್ನು 22 ಪತ್ರಿಕಾ ಸಂಸ್ಥೆಗಳು ಬೆಂಬಲಿಸಿವೆ. ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಪ್ರೆಸ್ ಕ್ಲಬ್ ಆಫ್ ಹೈದರಾಬಾದ್, ಸ್ಟೇಟ್ ಪ್ರೆಸ್ ಕ್ಲಬ್ ಮಧ್ಯಪ್ರದೇಶ್, ದಿಲ್ಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಇಂಡಿಯನ್ ವಿಮೆನ್ ಪ್ರೆಸ್ ಕಾರ್ಪ್ಸ್, ಪ್ರೆಸ್ ಅಸೋಸಿಯೇಷನ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್, ವರ್ಕಿಂಗ್ ನ್ಯೂಸ್ ಕ್ಯಾಮೆರಾಮೆನ್ಸ್ ಅಸೋಸಿಯೇಷನ್, ಮುಂಬೈ ಪ್ರೆಸ್ ಕ್ಲಬ್, ಪ್ರೆಸ್ ಕ್ಲಬ್ ಜಮ್ಮು, ಕೇರಳ ಪ್ರೆಸ್ ಕ್ಲಬ್, ದೆಹಲಿ 12) ಇಂಡಿಯನ್ ಜರ್ನಲಿಸ್ಟ್ ಯೂನಿಯನ್, ಪ್ರೆಸ್ ಕ್ಲಬ್ ಕೋಲ್ಕತ್ತಾ, ಪ್ರೆಸ್ ಕ್ಲಬ್ ಬೆಂಗಳೂರು, ಗುವಾಹಟಿ ಪ್ರೆಸ್ ಕ್ಲಬ್, ಶಿಲ್ಲಾಂಗ್ ಪ್ರೆಸ್ ಕ್ಲಬ್, ಚೆನ್ನೈ ಪ್ರೆಸ್ ಕ್ಲಬ್, ಪಿಂಕ್ ಸಿಟಿ ಪ್ರೆಸ್ ಕ್ಲಬ್ ಜೈಪುರ್, ಚಂಡೀಗಢ್ ಪ್ರೆಸ್ ಕ್ಲಬ್, ಪ್ರೆಸ್ ಕ್ಲಬ್ ತಿರುವನಂತಪುರಂ, ಅರುಣಾಚಲ್ ಪ್ರೆಸ್ ಕ್ಲಬ್, ಇಟಾನಗರ್ ಮತ್ತು ಅಗರ್ತಲ ಪ್ರೆಸ್ ಕ್ಲಬ್ ಅವುಗಳಲ್ಲಿ ಸೇರಿವೆ.
ಸೌಜನ್ಯ: thewire.in