1995 ರ ವಕ್ಫ್ ಕಾಯ್ದೆಯನ್ನು ಪ್ರಶ್ನಿಸಿ ಅರ್ಜಿ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ: 1995 ರ ವಕ್ಫ್ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ದಿಲ್ಲಿ ನಿವಾಸಿ ನಿಖಿಲ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಎ ಜಿ ಮಸಿಹ್ ಅವರಿದ್ದ ಪೀಠವು ನೋಟಿಸ್ ಜಾರಿ ಮಾಡಿದೆ.
ವಕೀಲ ಹರಿಶಂಕರ್ ಜೈನ್ ಮತ್ತು ಇನ್ನೊಬ್ಬ ವ್ಯಕ್ತಿಯು ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದ್ದರು.
ವಕ್ಫ್ ಕಾಯ್ದೆಗೆ ಇತ್ತೀಚೆಗೆ ಮಾಡಲಾದ ತಿದ್ದುಪಡಿಗಳನ್ನು ಪ್ರಶ್ನಿಸುವ ರಿಟ್ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಮಸಿಹ್ ಅವರ ಪೀಠವು, 1995 ರ ಕಾಯ್ದೆಯನ್ನು ಹಲವು ವರ್ಷಗಳ ನಂತರ ಈಗ ಏಕೆ ಪ್ರಶ್ನಿಸಲಾಗುತ್ತಿದೆ ಎಂದು ಕೇಳಿತ್ತು.
ಇದಕ್ಕೆ ಅರ್ಜಿದಾರರಾದ ಹರಿಶಂಕರ್ ಜೈನ್ ಪರವಾಗಿ ಹಾಜರಾದ ವಕೀಲ ವಿಷ್ಣುಶಂಕರ್ ಜೈನ್, ಅರ್ಜಿದಾರರು 1995 ರ ಕಾಯ್ದೆಯನ್ನು ಬಹಳ ಹಿಂದೆಯೇ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಆಗ ಹೈಕೋರ್ಟ್ ಸಂಪರ್ಕಿಸಲು ಸೂಚಿಸಲಾಯಿತು ಎಂದು ವಿವರಿಸಲು ಪ್ರಯತ್ನಿಸಿರೂ ಅದಕ್ಕೆ ಪೀಠವು ಒಪ್ಪಿಲ್ಲ.
ಮಂಗಳವಾರ ನ್ಯಾಯಪೀಠವು ವಕೀಲ ಅಶ್ವಿನಿ ಉಪಾಧ್ಯಾಯ ಅವರನ್ನು 1995 ರ ಕಾಯ್ದೆಯನ್ನು ಪ್ರಶ್ನಿಸುವ ಅರ್ಜಿಗಳನ್ನು ಈಗ ಏಕೆ ಕೈಗೆತ್ತಿಕೊಳ್ಳಬೇಕು ಎಂದು ಮತ್ತೆ ಕೇಳಿತು. ಮಾಜಿ ಸಿಜೆಐ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರ ಪೀಠವು 1995 ರ ಕಾಯ್ದೆಗೆ ಸಂಬಂಧಿಸಿದ ಸವಾಲನ್ನು ಪ್ರತ್ಯೇಕವಾಗಿ ಆಲಿಸಲು ಈಗಾಗಲೇ ಒಪ್ಪಿಕೊಂಡಿತ್ತು ಮತ್ತು 2025 ರ ತಿದ್ದುಪಡಿಗಳನ್ನು ಪ್ರಶ್ನಿಸಿದವರಿಗೆ ಅದಕ್ಕೆ ತಮ್ಮ ಪ್ರತಿಕ್ರಿಯೆಯನ್ನು ಸಲ್ಲಿಸಲು ಅವಕಾಶ ಮಾಡಿಕೊಟ್ಟಿತ್ತು ಎಂದು ಉಪಾಧ್ಯಾಯ ಗಮನಸೆಳೆದರು.
1995 ರ ವಕ್ಫ್ ಕಾಯ್ದೆಯನ್ನು ಪ್ರಶ್ನಿಸುವ ರಿಟ್ ಅರ್ಜಿಗಳು ಮತ್ತು 2013 ರಲ್ಲಿ ಮಾಡಲಾದ ತಿದ್ದುಪಡಿಗಳು, W.P. (C) ಸಂಖ್ಯೆ 353/2025 “ಹರಿಶಂಕರ್ ಜೈನ್ ಮತ್ತು ಅನರ್. v. ಯೂನಿಯನ್ ಆಫ್ ಇಂಡಿಯಾ ಮತ್ತು ಅದರ್ಸ್” ಸೇರಿದಂತೆ, ಏಪ್ರಿಲ್ 17, 2025 ರಂದು ಸಿಜೆಐ ಖನ್ನಾ ನೇತೃತ್ವದ ಪೀಠದ ಆದೇಶವನ್ನು ಉಪಾಧ್ಯಾಯ ಉಲ್ಲೇಖಿಸಿದರು.
ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಮಂಗಳವಾರ, 2025 ರ ತಿದ್ದುಪಡಿಯನ್ನು ಪ್ರಶ್ನಿಸುವ ಅರ್ಜಿಗಳ ಜೊತೆಗೆ 1995 ರ ಕಾಯ್ದೆ ಪ್ರಶ್ನಿಸಿದ ಅರ್ಜಿಯ ವಿಚಾರಣೆಗೆ ನ್ಯಾಯಾಲಯವು ಅವಕಾಶ ನೀಡಿಲ್ಲ ಎಂದು ಹೇಳಿದರು. 1995 ರ ಕಾಯ್ದೆಯನ್ನು ಪ್ರಶ್ನಿಸಿ ಜೈನ್ ಸಲ್ಲಿಸಿದ ಇತರ ಅರ್ಜಿಯೊಂದಿಗೆ ಉಪಾಧ್ಯಾಯ ಅವರ ಅರ್ಜಿಯನ್ನು ಸೇರಿಸಿದರೆ ಯಾವುದೇ ಆಕ್ಷೇಪಣೆ ಇಲ್ಲ ಎಂದು ಭಾಟಿ ಹೇಳಿದರು.