×
Ad

ನಾಗರಿಕರ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲು ಪೋಲಿಸರು ಅನಿಯಂತ್ರಿತ ಅಧಿಕಾರ ಬಳಸುವಂತಿಲ್ಲ: ಅಲಹಾಬಾದ್ ಹೈಕೋರ್ಟ್

Update: 2025-08-31 15:50 IST

ಸಾಂದರ್ಭಿಕ ಚಿತ್ರ 

ಅಲಹಾಬಾದ್: ವೈಯಕ್ತಿಕ ಇಷ್ಟಾನಿಷ್ಟಗಳ ಆಧಾರದಲ್ಲಿ ನಾಗರಿಕರ ಮೂಲಭೂತ ಸ್ವಾತಂತ್ರ್ಯಗಳನ್ನು ಮೊಟುಕುಗೊಳಿಸಲು ಪೋಲಿಸರು ಅನಿಯಂತ್ರಿತ ಅಧಿಕಾರವನ್ನು ಬಳಸುವಂತಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಹೇಳಿದೆ.

ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ನಿವಾಸಿ ಮುಹಮ್ಮದ್ ವಝೀರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪನ್ನು ಹೊರಡಿಸಿದೆ.

ವಝೀರ್ ವಿರುದ್ಧ 2016ರಲ್ಲಿ ಗೋ ಹತ್ಯೆ ತಡೆ ಕಾಯ್ದೆಯಡಿ ಒಂದು ಪ್ರಕರಣವು ದಾಖಲಾಗಿದ್ದು,ಇತರ ಯಾವುದೇ ಕ್ರಿಮಿನಲ್ ದಾಖಲೆಯನ್ನು ಹೊಂದಿರಲಿಲ್ಲ. ಆದಾಗ್ಯೂ ಪೋಲಿಸರು ಅವರ ವಿರುದ್ಧ ರೌಡಿಶೀಟ್ ತೆರೆದಿದ್ದರು. ತನ್ನ ಹೆಸರನ್ನು ರೌಡಿ ಶೀಟ್‌ನಿಂದ ತೆಗೆಯುವಂತೆ ವಝೀರ್ ಜೂನ್‌ನಲ್ಲಿ ಮಾಡಿಕೊಂಡಿದ್ದ ಮನವಿಯನ್ನು ಪೋಲಿಸರು ತಿರಸ್ಕರಿಸಿದ್ದರು.

ರೌಡಿ ಶೀಟ್ ತೆರೆಯುವ ಮುನ್ನ ವ್ಯಕ್ತಿಯ ವಿರುದ್ಧ ನ್ಯಾಯಸಮ್ಮತ ಆರೋಪವನ್ನು ಶಂಕಿಸಲು ಸ್ಪಷ್ಟ ಮತ್ತು ವಿಶ್ವಾಸಾರ್ಹ ಪುರಾವೆಗಳ ಅಗತ್ಯವಿದೆ ಎಂದು ಹೇಳಿದ ಉಚ್ಚ ನ್ಯಾಯಾಲಯವು, ರೌಡಿ ಶೀಟ್ ತೆರೆಯುವುದಕ್ಕೆ ಸಂಬಂಧಿಸಿದ ಉತ್ತರ ಪ್ರದೇಶ ಪೋಲಿಸ್ ನಿಯಮಾವಳಿಗಳ 228 ಮತ್ತು 240ನೇ ನಿಯಮಗಳನ್ನು ನಾಗರಿಕರ ಹಕ್ಕುಗಳನ್ನು ನಿರ್ಬಂಧಿಸಲು ನಿರಂಕುಶವಾಗಿ ಬಳಸುವಂತಿಲ್ಲ ಎಂದು ಬೆಟ್ಟು ಮಾಡಿತು.

ವಝೀರ್ ವೃತ್ತಿಪರ ಅಪರಾಧಿ ಎಂದು ತೋರಿಸುವ ಯಾವುದೇ ಪುರಾವೆಯಿಲ್ಲದಿದ್ದರೂ ಪೋಲಿಸ್ ಅಧೀಕ್ಷಕರು ರೌಡಿ ಶೀಟ್ ಮುಚ್ಚುವಂತೆ ಅವರ ಮನವಿಯನ್ನು ಉಡಾಫೆಯಿಂದ ತಿರಸ್ಕರಿಸಿದ್ದಾರೆ. ಎಂಟು ವರ್ಷಗಳ ಹಿಂದಿನ ಏಕೈಕ ಪ್ರಕರಣ ರೌಡಿ ಶೀಟ್ ತೆರೆಯುವುದಕ್ಕೆ ಸಮರ್ಥನೀಯ ಕಾರಣವಲ್ಲ ಎಂದು ತೀರ್ಪಿನಲ್ಲಿ ಹೇಳಿದ ಉಚ್ಚ ನ್ಯಾಯಾಲಯವು,ವಝೀರ್ ವಿರುದ್ಧದ ರೌಡಿ ಶೀಟ್ ಮುಚ್ಚುವಂತೆ ಪೋಲಿಸರಿಗೆ ಆದೇಶಿಸಿತು. ವಝೀರ್‌ರನ್ನು ಕಣ್ಗಾವಲಿನಲ್ಲಿ ಇರಿಸುವಂತಿಲ್ಲ ಎಂದೂ ಅದು ಸ್ಪಷ್ಟಪಡಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News