×
Ad

ಭಯ ಹುಟ್ಟಿಸಿ ಮತಗಳನ್ನು ಗಳಿಸಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ:‌ ಪ್ರಶಾಂತ್ ಕಿಶೋರ್‌ ಆರೋಪ

Update: 2025-11-08 16:38 IST

ಪ್ರಶಾಂತ್ ಕಿಶೋರ್ (Photo: PTI)

ಹೊಸದಿಲ್ಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಂದಿಗಿಂತ ಭಿನ್ನವಾಗಿ ಅತ್ಯಧಿಕ ಪ್ರಮಾಣದಲ್ಲಿ ಮತದಾನ ನಡೆಯುತ್ತಿರುವುದು ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ ಎನ್ನುವುದರ ನೇರ ಸಂಕೇತವಾಗಿದೆ ಎಂದು ಜನ ಸುರಾಜ್ ಪಕ್ಷದ ಸ್ಥಾಪಕ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಎನ್‌ಡಿಎ ಬಳಿ ನೀಡಲು ಬೇರೆ ಏನೂ ಇಲ್ಲ, ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರವನ್ನು ಉಳಿಸಿಕೊಳ್ಳಲು ಭಯವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಸುಪೌಲ್‌ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕಿಶೋರ್, ವಿಶ್ಲೇಷಕರು ಕಡಿಮೆ ಮತದಾನವನ್ನು ಊಹಿಸಿದ್ದರು,‌ ಆದರೆ ದೇಶದ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಮತದಾನ ಪ್ರಮಾಣವನ್ನು ಬಿಹಾರವು ದಾಖಲಿಸುತ್ತದೆ ಎನ್ನುವುದನ್ನು ಯಾರೂ ಊಹಿಸಿರಲಿಲ್ಲ ಎಂದರು. ಮತದಾನದ ಪ್ರಮಾಣವು ದಶಕಗಳ ಕಾಲದ ಒಂದೇ ರೀತಿಯ ರಾಜಕೀಯದ ಬಳಿಕ ಮತದಾರರು ಪರ್ಯಾಯವನ್ನು ಬದಲಿಸುತ್ತಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಬಿಹಾರದಲ್ಲಿ ಖಂಡಿತವಾಗಿಯೂ ಬದಲಾವಣೆಯಾಗುತ್ತದೆ ಎನ್ನುವುದನ್ನು ಸಮೀಕ್ಷೆಯ ಸಂಖ್ಯೆಗಳೇ ತೋರಿಸಿವೆ ಎಂದು ಅವರು ಪ್ರತಿಪಾದಿಸಿದರು.

ತನ್ನ ಮೊದಲ ಚುನಾವಣೆಯಲ್ಲಿ 200ಕ್ಕೂ ಅಧಿಕ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಕಿಶೋರ್,‌ ಹೆಚ್ಚಿನ ಮತದಾನವು ಬೆದರಿಕೆಯಿಂದ ಕೂಡಿದ ಮನವಿಗಳನ್ನು ಮತದಾರರು ತಿರಸ್ಕರಿಸುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು. ಪ್ರಧಾನಿಯವರ ಬಳಿ ಹೇಳಲು ಏನೂ ಉಳಿದಿಲ್ಲ, ಹೀಗಾಗಿ ಆರ್‌ಜೆಡಿಯ ಭಯ ಹುಟ್ಟಿಸಿ ಮತಗಳನ್ನು ಗಳಿಸಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದ ಅವರು, ಜಂಗಲ್ ರಾಜ್ ಮತ್ತೆ ಮರಳಬಾರದು ಎಂದು ನೀವು ಬಯಸಿದ್ದರೆ ನೀವೇನು ಮಾಡಬೇಕು? ಜನ ಸುರಾಜ್ ನೂತನ ಪರ್ಯಾಯವಾಗಿದೆ ಎಂದು ಹೇಳಿದರು.

ಬಿಹಾರದಲ್ಲಿ ನ.6ರಂದು 121 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಸುಮಾರು ಶೇ.65ರಷ್ಟು ಮತದಾನವಾಗಿದ್ದು,ಇದು 2020ರ ವಿಧಾನಸಭಾ ಚುನಾವಣೆ(ಶೇ.57.29) ಮತ್ತು 2024ರ ಲೋಕಸಭಾ ಚುನಾವಣೆ(ಶೇ.56.28)ಗಿಂತಲೂ ಅಧಿಕವಾಗಿದೆ. ಸ್ವಾತಂತ್ರ್ಯಾನಂತರ ಅತ್ಯಧಿಕ ಮತದಾರರ ಭಾಗವಹಿಸುವಿಕೆಯನ್ನು ಇದು ಸೂಚಿಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ಮತದಾನವು ಮತದಾರರು ಭಯದ ವಿರುದ್ಧ ಮತ ಚಲಾಯಿಸುತ್ತಿದ್ದಾರೆ, ಭಯದಿಂದ ಅಲ್ಲ ಎನ್ನುವುದನ್ನು ತೋರಿಸಿದೆ ಎಂದ ಕಿಶೋರ,ಬಿಹಾರದ ಶೇ.60ಕ್ಕೂ ಹೆಚ್ಚಿನ ಜನರು ಬದಲಾವಣೆಯನ್ನು ಬಯಸಿದ್ದಾರೆ. ಜನ ಸುರಾಜ್ ಬಂದ ಮೇಲೆ ಜನರಿಗೆ ಪರ್ಯಾಯ ಆಯ್ಕೆ ಲಭಿಸಿದೆ. ಜನರು ಬದಲಾವಣೆಗಾಗಿ ತಮ್ಮ ಮತಗಳನ್ನು ನೀಡಿದ್ದಾರೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News