×
Ad

ಪ್ರಯಾಗ್‌ರಾಜ್ ನದಿ ನೀರು ಸ್ನಾನಕ್ಕೆ ಯೋಗ್ಯವಲ್ಲ!: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ

Update: 2025-02-18 21:07 IST

PC : PTI 

ಹೊಸದಿಲ್ಲಿ : ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್‌ ರಾಜ್‌ ನ ನದಿಯ ನೀರಿನಲ್ಲಿ ಮಾನವ ಹಾಗೂ ಪ್ರಾಣಿಗಳ ಮಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೋಲಿಪಾರ್ಮ್ ಬ್ಯಾಕ್ಟೀರಿಯಾಗಳ ಮಟ್ಟ ಅಧಿಕವಾಗಿರುವುದರಿಂದ ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಜನವರಿ 12, 13ರಂದು ಗಂಗಾ ನದಿಯ ನೀರಿನ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು. ಅದು ನೀರಿನ ಸ್ಯಾಂಪಲ್‌ ನ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸೋಮವಾರ ಸಲ್ಲಿಸಿದೆ.

ಪ್ರಯಾಗ್‌ ರಾಜ್‌ ನಲ್ಲಿ ಗಂಗಾ ಹಾಗೂ ಯಮುನಾ ನದಿಗಳಿಗೆ ಒಳ ಚರಂಡಿ ನೀರು ಬಿಡುವುದನ್ನು ತಡೆಯುವ ಕ್ರಮಗಳನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಅಧ್ಯಕ್ಷರಾಗಿರುವ ಪ್ರಕಾಶ್ ಶ್ರೀವಾತ್ಸವ ನೇತೃತ್ವದ ಹಸಿರು ನ್ಯಾಯ ಮಂಡಳಿ ಸಮಿತಿ ಪರಿಶೀಲನೆ ನಡೆಸಿತು. ನೀರಿನ ಗುಣಮಟ್ಟವನ್ನು ಅನುಸರಣೆ ಮಾಡದೇ ಇರುವುದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಫೆಬ್ರವರಿ 3ರ ವರದಿ ಬೆಳಕು ಚೆಲ್ಲಿರುವುದನ್ನು ಸಮಿತಿ ಗಮನಿಸಿದೆ. ಪರಿಶೀಲಿಸಲಾದ ಎಲ್ಲಾ ಸ್ಥಳಗಳು ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳಿಂದ ಕಲುಷಿತವಾಗಿರುವುದರಿಂದ ನದಿ ನೀರು ಸ್ನಾನ ಯೋಗ್ಯವಾಗಿಲ್ಲ ಎಂದು ಕೂಡ ವರದಿ ಉಲ್ಲೇಖಿಸಿದೆ.

ಪುಣ್ಯ ಸ್ನಾನದ ದಿನಗಳು ಸೇರಿದಂತೆ ಮಹಾಕುಂಭ ಮೇಳದ ಸಂದರ್ಭ ದೊಡ್ಡ ಸಂಖ್ಯೆಯ ಜನರು ನದಿಯಲ್ಲಿ ಸ್ನಾನ ಮಾಡಿರುವುದು ನೀರಿನಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳ ಸಂಖ್ಯೆಯಲ್ಲಿ ಏರಿಕೆಯಾಗಲು ಕಾರಣವಾಗಿದೆ ಎಂದು ವರದಿ ಹೇಳಿದೆ.

ಈ ಹಿಂದೆ ನಿರ್ದೇಶಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತ ವಿಸ್ತೃತ ವರದಿ ಸಲ್ಲಿಸಲು ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ವಿಫಲವಾಗಿರುವ ಕುರಿತು ಸಮಿತಿ ಗಮನಿಸಿದೆ. ಇದರ ಬದಲು ಅದು ನೀರಿನ ಪರೀಕ್ಷೆಯ ಫಲಿತಾಂಶದೊಂದಿಗೆ ಪತ್ರವನ್ನು ಸಲ್ಲಿಸಿದೆ ಎಂದು ಅದು ಹೇಳಿದೆ.

ವರದಿ ಪರಿಶೀಲಿಸಲು ಹಾಗೂ ಪ್ರತ್ರಿಕ್ರಿಯಿಸಲು ಉತ್ತರಪ್ರದೇಶದ ವಕೀಲರಿಗೆ ನ್ಯಾಯಾಧಿಕರಣ ಒಂದು ದಿನದ ಕಾಲಾವಕಾಶ ನೀಡಿತ್ತು. ಇದಲ್ಲದೆ, ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಯಾಗ್‌ ರಾಜ್‌ ನಲ್ಲಿ ನೀರಿನ ಗುಣಮಟ್ಟಕ್ಕೆ ಕಾರಣವಾದ ರಾಜ್ಯಾಡಳಿತಕ್ಕೆ ಫೆಬ್ರವರಿ 19ರಂದು ವರ್ಚುವಲ್ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.

ಗಂಗಾ, ಯಮುನಾ ನದಿ ನೀರಿನ ಗುಣಮಟ್ಟದ ಬಗ್ಗೆ ಪ್ರತಿಕ್ರಿಯಿಸಿರುವ ಜ್ಯೋತಿಶ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ, ಕುಂಭಮೇಳ ಆರಂಭವಾಗುವುದಕ್ಕಿಂತ ಮುನ್ನವೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಗಂಗಾ ಹಾಗೂ ಯಮುನಾ ನದಿಯ ನೀರಿನ ಗುಣಮಟ್ಟದ ಬಗ್ಗೆ ಗಮನ ಸೆಳೆದಿತ್ತು. ಅದು ನಿರ್ದಿಷ್ಟ ನಿರ್ದೇಶನಗಳನ್ನು ನೀಡಿತ್ತು. ಮುಖ್ಯವಾಗಿ ಚರಂಡಿ ನೀರು ನದಿಗೆ ಹರಿಯುವುದನ್ನು ತಡೆಗಟ್ಟುವಂತೆ ಸೂಚನೆ ನೀಡಿತ್ತು. ಅಲ್ಲಿ 40ರಿಂದ 50 ಕೋಟಿ ಜನರು ಸ್ನಾನ ಮಾಡಿದ್ದಾರೆ. ಅಲ್ಲದೆ, ಇದು ಜಗತ್ತಿನಾದ್ಯಂತ ಪ್ರಚಾರವಾಗುತ್ತಿದೆ. ಆದರೆ, ಸ್ನಾನ ಮಾಡುವುದಕ್ಕೆ ಮೂಲಭೂತ ಸೌಲಭ್ಯವಾದ ಸ್ವಚ್ಛ ನೀರು ಪೂರೈಸಿಲ್ಲ ಎಂದಿದ್ದಾರೆ.

ಕುಂಭ ಮೇಳದಿಂದ ಹಿಂದಿರುಗಿದವರಲ್ಲಿ ಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿವೆ ಎಂದು ದಿಲ್ಲಿಯ ಇಂದ್ರಪ್ರಸ್ಥ ಅಪಲ್ಲೊ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News