ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಬಂಧನ
ಉನ್ನಿಕೃಷ್ಣನ್ ಪೋಟ್ಟಿ (Photo: madhyamam.com)
ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟ್ಟಿಯನ್ನು ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ.
ಗುರುವಾರ ಬೆಂಗಳೂರು ಮೂಲದ ಉದ್ಯಮಿ ಉನ್ನಿಕೃಷ್ಣನ್ ಪೋಟ್ಟಿಯನ್ನು ವಶಕ್ಕೆ ಪಡೆದಿದ್ದ ವಿಶೇಷ ತನಿಖಾ ತಂಡ, ಅವರನ್ನು ತಿರುವನಂತಪುರಂನಲ್ಲಿ ತೀವ್ರ ವಿಚಾರಣೆಗೊಳಪಡಿಸಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆಯ ಬಳಿಕ ಉನ್ನಿಕೃಷ್ಣನ್ ಪೋಟ್ಟಿಯನ್ನು ಬಂಧಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಂದು ಮಧ್ಯಾಹ್ನದ ವೇಳೆಗೆ ಉನ್ನಿಕೃಷ್ಣನ್ ಪೋಟ್ಟಿಯನ್ನು ಪಟ್ಟಣಂತಿಟ್ಟ ನ್ಯಾಯಾಲಯದೆದುರು ಹಾಜರುಪಡಿಸಲಾಗುವುದು. ವಿಚಾರಣೆಯ ವೇಳೆ ಆರೋಪಿಯನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ವಿಶೇಷ ತನಿಖಾ ತಂಡ ನ್ಯಾಯಾಲಯವನ್ನು ಕೋರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಹೈಕೋರ್ಟ್ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡ ಎರಡು ಪ್ರಕರಣಗಳ ತನಿಖೆ ನಡೆಸುತ್ತಿದೆ. ದ್ವಾರಪಾಲಕ ಮೂರ್ತಿಗಳಲ್ಲಿನ ಚಿನ್ನ ಕಳವು ಹಾಗೂ ದೇವಸ್ಥಾನ ಗರ್ಭಗುಡಿಯ ಬಾಗಿಲಿನ ಚೌಕಟ್ಟಿನಲ್ಲಿದ್ದ ಚಿನ್ನ ಕಾಣೆಯಾದ ಎರಡು ಪ್ರಕರಣಗಳ ತನಿಖೆಯನ್ನು ವಿಶೇಷ ತನಿಖಾ ತಂಡ ಕೈಗೊಂಡಿದೆ.
ಇದಕ್ಕೂ ಮುನ್ನ, ತಿರುವಾಂಕೂರು ದೇವಸ್ವಂ ಮಂಡಳಿಯು ಉನ್ನಿಕೃಷ್ಣನ್ ಪೋಟ್ಟಿಯನ್ನು ಎರಡು ದಿನಗಳ ವಿಚಾರಣೆಗೊಳಪಡಿಸಿತ್ತು. ಈ ಪ್ರಕರಣಗಳ ತನಿಖೆಯನ್ನು ಪೂರ್ಣಗೊಳಿಸಲು ವಿಶೇಷ ತನಿಖಾ ತಂಡಕ್ಕೆ ಕೇರಳ ಹೈಕೋರ್ಟ್ ಆರು ವಾರಗಳ ಗಡುವು ವಿಧಿಸಿದೆ.