×
Ad

ಪ್ರಧಾನಿ ಆಪ್ತ ಶರ್ಮಾ, ಕೈಗಾರಿಕೋದ್ಯಮಿ ಪರ ಲಾಬಿ ಮಾಡಿದ್ದರು : ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಸ್ವರೂಪ್

Update: 2024-01-28 16:19 IST

Photo: theprint.in

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಸಹಾಯಕ ಎ.ಕೆ.ಶರ್ಮಾ ಅವರು ಕೈಗಾರಿಕೋದ್ಯಮಿಯೋರ್ವರಿಗೆ ಕಲ್ಲಿದ್ದಲು ಗಣಿಯನ್ನು ಹಂಚಿಕೆ ಮಾಡುವಂತೆ ನನ್ನ ಬೆನ್ನು ಬಿದ್ದಿದ್ದರು. ಅವರು ಕೈಗಾರಿಕೋದ್ಯಮಿಗೆ ‘ಕಾನೂನುಬಾಹಿರ ಅನುಕೂಲ’ವನ್ನು ಒದಗಿಸಲು ಬಯಸಿದ್ದರು ಎನ್ನುವುದನ್ನು ತಾನು ಅರ್ಥ ಮಾಡಿಕೊಂಡಿದ್ದೆ ಎಂದು ಆಗ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದ ಅನಿಲ್ ಸ್ವರೂಪ್ ಅವರು ತನ್ನ ಕೃತಿ ‘ಎನ್ಕೌಂಟರ್ಸ್ ವಿಥ್ ಪಾಲಿಟಿಷಿಯನ್ಸ್ ’ನಲ್ಲಿ ಬಹಿರಂಗಗೊಳಿಸಿದ್ದಾರೆ.

ಜ.20ರಂದು ಬಿಡುಗಡೆಗೊಂಡ ಕೃತಿಯಲ್ಲಿ ಅವರು, ತಾನು ಅದಕ್ಕೆ ಮಣಿದಿರಲಿಲ್ಲ ಮತ್ತು ಬಳಿಕ ತನ್ನನ್ನು ಕಲ್ಲಿದ್ದಲು ಸಚಿವಾಲಯದಿಂದ ಎತ್ತಂಗಡಿ ಮಾಡಲಾಗಿತ್ತು ಎಂದು ಬರೆದಿದ್ದಾರೆ.

ಮಾಜಿ ಗುಜರಾತ್ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಶರ್ಮಾ 2014ರಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪ್ರಧಾನಿ ಕಚೇರಿಗೆ ಸೇರಿದ್ದರು. ಪ್ರಸ್ತುತ ಅವರು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರಕಾರದಲ್ಲಿ ನಗರಾಭಿವೃದ್ಧಿ ಮತ್ತು ಇಂಧನ ಸಚಿರಾಗಿದ್ದಾರೆ. 2021ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದಿದ್ದ ಅವರನ್ನು ಉತ್ತರ ಪ್ರದೇಶ ಬಿಜೆಪಿ ಉಪಾಧ್ಯಕ್ಷರಾಗಿ ನೇಮಿಸಲಾಗಿತ್ತು. 2022ರಲ್ಲಿ ಅವರು ಯೋಗಿ ಆದಿತ್ಯನಾಥ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.

ಸ್ವರೂಪ್ ಅಕ್ಟೋಬರ್ 2014ರಿಂದ ನವಂಬರ್ 2016ರವರೆಗೆ ಕೇಂದ್ರ ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದರು. ಬಳಿಕ ಅವರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಗೆ ವರ್ಗಾಯಿಸಲಾಗಿತ್ತು.

ತನ್ನ ಕೃತಿಯಲ್ಲಿ ಶರ್ಮಾರ ಕುರಿತು ಮಾತನಾಡಿರುವ ಸ್ವರೂಪ್, ‘ಕೈಗಾರಿಕೋದ್ಯಮಿಗೆ ಗಣಿ ಹಂಚಿಕೆ ಮಾಡುವಂತೆ ಬೇಡಿಕೆ ಬರುವವರೆಗೂ ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು. ಕೈಗಾರಿಕೋದ್ಯಮಿ ಅನುಕೂಲವನ್ನು ಬಯಸಿದ್ದರು. ಆದರೆ ಅದು ಕಾನೂನುಬಾಹಿರ ಎನ್ನುವುದನ್ನು ನಾನು ಅರ್ಥ ಮಾಡಿಕೊಂಡಿದ್ದೆ. ಶರ್ಮಾ ತನ್ನ ಮನವೊಲಿಸಲು ಪಟ್ಟು ಬಿಡದೆ ಪ್ರಯತ್ನಿಸಿದ್ದರು. ಆದರೆ ಒಮ್ಮೆಯೂ ಅವರು ಅನುಚಿತವಾಗಿ ವರ್ತಿಸಿರಲಿಲ್ಲ. ಅವರ ಮನವೊಲಿಕೆಯ ಕೌಶಲ್ಯ ಹೇಗಿತ್ತೆಂದರೆ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಹೆಸರಾಗಿದ್ದ ಮತ್ತು ತಪ್ಪು ಎಂದು ನಾನು (ಸ್ವರೂಪ್) ಭಾವಿಸುವ ಕೆಲಸವನ್ನು ನಾನೆಂದಿಗೂ ಮಾಡುವುದಿಲ್ಲ ಎನ್ನುವುದನ್ನು ಚೆನ್ನಾಗಿ ತಿಳಿದಿದ್ದ ಪ್ರಧಾನಿಯವರ ಆಪ್ತ ಕಾರ್ಯದರ್ಶಿಗಳು ಸಹ ಕೈಗಾರಿಕೋದ್ಯಮಿಯ ಪರವಾಗಿ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನನ್ನ ಮೇಲೆ ಒತ್ತಡವನ್ನು ಹೇರಲು ಪ್ರಾರಂಭಿಸಿದ್ದರು’ ಎಂದು ಬರೆದಿದ್ದಾರೆ.

ನೃಪೇಂದ್ರ ಮಿಶ್ರಾ ಆಗ ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಳಿಕ ಅವರನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು.

‘ಅದೇನಿದ್ದರೂ ನಾನು ಈ ಒತ್ತಡಗಳಿಗೆ ಮಣಿದಿರಲಿಲ್ಲ. ನನ್ನನ್ನು ಕಲ್ಲಿದ್ದಲು ಸಚಿವಾಲಯದಿಂದ ಎತ್ತಂಗಡಿ ಮಾಡಲಾಗಿತ್ತು ’ ಎಂದು ಸ್ವರೂಪ್ ಹೇಳಿದ್ದಾರೆ.

‘ಎನ್ಕೌಂಟರ್ಸ್ ವಿಥ್ ಪಾಲಿಟಿಷಿಯನ್ಸ್ ’ಸ್ವರೂಪ್ ಅವರ ಮೂರನೇ ಕೃತಿಯಾಗಿದ್ದು, ತಾನು ಭೇಟಿಯಾಗಿದ್ದ ಅಥವಾ ಜೊತೆಯಾಗಿ ಕೆಲಸ ಮಾಡಿದ್ದ ರಾಜಕಾರಣಿಗಳೊಂದಿಗಿನ ತನ್ನ ಅನುಭವಗಳನ್ನು ವಿವರಿಸಿದ್ದಾರೆ. ಇವರಲ್ಲಿ ನಾಲ್ವರು ಪ್ರಧಾನಿಗಳು, ಐವರು ರಾಷ್ಟ್ರಪತಿಗಳು, 28 ಮುಖ್ಯಮಂತ್ರಿಗಳು ಮತ್ತು ಹಲವು ಸಚಿವರು ಸೇರಿದ್ದಾರೆ.

1981ರ ತಂಡದ ಐಎಎಸ್ ಅಧಿಕಾರಿ ಸ್ವರೂಪ್ ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಹಗರಣದ ಬಳಿಕ ಕಲ್ಲಿದ್ದಲು ಹರಾಜುಗಳನ್ನು ಪಾರದರ್ಶಕಗೊಳಿಸಿದ್ದಕ್ಕಾಗಿ ವ್ಯಾಪಕ ಮನ್ನಣೆಗೆ ಪಾತ್ರರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News